ಕೆಇಆರ್‌ಸಿ ಯುನಿಟ್‌ಗೆ 36 ಪೈಸೆ ದರ ಏರಿಕೆ ಮಾಡಿದ್ದು, ಇದು ಗೃಹಜ್ಯೋತಿ ಬಳಕೆದಾರರಿಗೆ ಅನ್ವಯವಾಗುವುದಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಶೇ. 10ರಷ್ಟು ಜನರಿಗೆ ಮಾತ್ರ ಈ ದರ ಏರಿಕೆ ಅನ್ವಯವಾಗುತ್ತದೆ.
ಬೆಂಗಳೂರು (ಮಾ.20): ಸರ್ಕಾರಿ ನೌಕರರ ಪಿಂಚಣಿ ಹಾಗೂ ಗ್ರ್ಯಾಚುಟಿಗಾಗಿ ಸರ್ಕಾರದ ಪಾಲನ್ನು ಜನರಿಂದಲೇ ವಸೂಲಿ ಮಾಡುವ ನಿಟ್ಟಿನಲ್ಲಿ ಕೆಇಆರ್‌ಸಿ ಪ್ರತಿ ಯುನಿಟ್‌ನ ಮೇಲೆ 36 ಪೈಸೆ ದರ ಏರಿಕೆ ಮಾಡಿದೆ. ಏಪ್ರಿಲ್ 1 ರಿಂದ ಇದು ಜಾರಿಯಾಗಲಿದೆ ಎಂದು ತಿಳಿಸಿದೆ. ಇದರ ಬೆನ್ನಲ್ಲೇ ವಿದ್ಯುತ್ ದರ ಕೂಡ ಏರಿಕೆ ಆಗಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಪ್ರಕಟಣೆ ಬರಬೇಕಿದೆ. ಇದರ ನಡುವೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿದ್ಯುತ್ ದರ ಏರಿಕೆಯನ್ನು ಸರ್ಮಥನೆ ಮಾಡಿಕೊಂಡಿದ್ದು, ಇದು ಗೃಹಜ್ಯೋತಿ ಬಳಕೆದಾರರಿಗೆ ಅನ್ವಯ ಆಗೋದಿಲ್ಲ ಎಂದಿದ್ದಾರೆ. ಆದರೆ, ಗೃಹಜ್ಯೋತಿ ಹೊರತಾದವರಿಗೆ ಮಾತ್ರ ದುಪ್ಪಟ್ಟು ಹೊರೆಯಾಗುವುದು ಖಂಡಿತವಾಗಿದೆ.
ಈ ಬಗ್ಗೆ ಮಾತನಾಡಿದ ಸಂತೋಷ್ ಲಾಡ್, 'ನೀವು 200 ಯುನಿಟ್‌ಗಿಂತ ಕಡಿಮೆ ಬಳಕೆ ಮಾಡಿದರೆ, ಇದು ಅಪ್ಲೈ ಆಗೋದೇ ಇಲ್ಲ. ಕೇವಲ ಶೇ. 10ರಷ್ಟು ಜನಕ್ಕೆ ಮಾತ್ರವೇ ಈ 36 ಪೈಸೆ ದರ ಏರಿಕೆ ಅನ್ವಯವಾಗುತ್ತದೆ. ಗೃಹಜ್ಯೋತಿ ಫಲಾನುಭವಿಗಳಿಗೆ ಈ ದರ ಏರಿಕೆ ಅನ್ವಯ ಆಗೋದಿಲ್ಲ. ಕೆಇಆರ್‌ಸಿ ನಿಯಮದಂತೆ ದರ ಏರಿಕೆ ಮಾಡಲಾಗಿದೆ. ವಿದ್ಯುತ್ ದರ ಏರಿಕೆಗೂ ಗ್ಯಾರಂಟಿ ಯೋಜನೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನಸೌಧದಲ್ಲಿ ಹೇಳಿದ್ದಾರೆ.
ರಾಜ್ಯದಲ್ಲಿ 100 ಜನ ಇದ್ದರೆ, ಕೇವಲ 10 ಮಂದಿಗೆ ಮಾತ್ರವೇ ಯುನಿಟ್‌ಗೆ 36 ಪೈಸೆ ಏರಿಕೆ ಆಗಲಿದೆ. ಇನ್ನು ಶೇ. 90ರಷ್ಟು ಜನರಿಗೆ ಉಚಿತವಾಗಿಯೇ ಇರಲಿದೆ. ತೀರಾ ಕಡಿಮೆ ಜನರಿಗೆ ಈ ಏರಿಕೆ ಬಾಧಿಸಲಿದೆ ಎಂದು ಹೇಳಿದ್ದಾರೆ.
ಒಂದು ಕಡೆ ಉಚಿತ ನೀಡುತ್ತಿದ್ದೀರಿ, ಇನ್ನೊಂದೆಡೆ ಬೆಲೆ ಏರಿಕೆ ಮಾಡುತ್ತಿದ್ದೀರಿ ಅನ್ನೋ ಪ್ರಶ್ನೆಗೆ, 'ಜಗತ್ತು ಇರೋದೇ ಹಾಗೆ. ನಮ್ಮ ದೇಶ ಮಾತ್ರವಲ್ಲ, ಇಡೀ ಪ್ರಪಂಚವೇ ಹಾಗೆ ನಡೆಯುತ್ತಿರೋದು. ಎಲ್ಲೂ ಒಂದು ಕಡೆ ತೆರಿಗೆ ಏರಿಸಬೇಕು, ಎಲ್ಲೋ ಒಂದು ಕಡೆ ಉಚಿತವಾಗಿ ಕೊಡಬೇಕು. ಈ ದೇಶದಲ್ಲಿ ಶೇ. 64 ರಷ್ಟು ಬಡವರು ಜಿಎಸ್‌ಟಿ ತುಂಬುತ್ತಾರೆ. ಅವರಿಗೆ ನೀವು ಏನು ಕೊಟ್ಟಿದ್ದೀರಿ. ಅವರು ಯಾವುದೇ ವ್ಯವಹಾರ ಮಾಡೋದಿಲ್ಲ. ಆತ ಬಿಸ್ಕೇಟ್ ತೆಗೆದುಕೊಂಡರೂ, ಖಾರದ ಪುಡಿ, ಮೊಸರು, ಅರಿಶಿನ ಪುಡಿ ಯಾವುದೇ ತೆಗೆದುಕೊಂಡರೂ ಅದಕ್ಕೆ ಜಿಎಸ್‌ಟಿ ಹಾಕುತ್ತಾರೆ. ಇವರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದೀರಿ?
12 ಲಕ್ಷದವರಿಗೆ ಆದಾಯ ತೆರಿಗೆ ವಿನಾಯಿತಿ ನೀಡಿದ್ದೀರಿ. ಒಳ್ಳೆಯ ವಿಚಾರ. ಆದರೆ, ಈ ಬಡವರಿಗೆ ಏನು ಮಾಡಿದ್ದೀರಿ? ಇವರಿಗೆ ಜಿಎಸ್‌ಟಿ ಯಾಕೆ ಕಡಿಮೆ ಮಾಡಬಾರದಾಗಿತ್ತು ಅನ್ನೋದು ನಮ್ಮ ಪ್ರಶ್ನೆ ಎಂದು ಹೇಳಿದ್ದಾರೆ.
86 ವರ್ಷದ ವೃದ್ಧೆ 2 ತಿಂಗಳ ಕಾಲ ಡಿಜಿಟಲ್ ಅರೆಸ್ಟ್; 20.25 ಕೋಟಿ ಕಳೆದುಕೊಂಡ ಮುಂಬೈ ಅಜ್ಜಿ!
