ಹಫೀಜ್ ಮೃತಪಟ್ಟಿರುವ ವಿಚಾರವನ್ನು ಆಫ್ಘಾನಿಸ್ತಾನದ ಅಧಿಕಾರಿಗಳು ಟೆಲಿಗ್ರಾಂ ಮೂಲಕ ಕೇರಳದಲ್ಲಿರುವ ಆತನ ಕುಟುಂಬದವರಿಗೆ ತಿಳಿಸಿದ್ದಾರೆ.

ನವದೆಹಲಿ(ಫೆ. 26): ಇಸ್ಲಾಮಿಕ್ ಸಂಘಟನೆ ಸೇರುತ್ತೇನೆಂದು ಹೇಳಿ ಮನೆ ಬಿಟ್ಟು ಹೋಗಿದ್ದ ಕೇರಳದ ಯುವಕನೊಬ್ಬ ಹೆಣವಾಗಿದ್ದಾನೆ. 21 ವರ್ಷದ ಹಫೀಜ್ ಆಫ್ಘಾನಿಸ್ತಾನದಲ್ಲಿ ಡ್ರೋನ್ ದಾಳಿಗೆ ಸಿಕ್ಕು ಮೃತಪಟ್ಟಿದ್ದಾನೆ ಎಂದು ನ್ಯೂಸ್18 ವಾಹಿನಿಯಲ್ಲಿ ವರದಿಯಾಗಿದೆ. ಕಳೆದ ವರ್ಷ ಕೇರಳದಿಂದ ನಾಪತ್ತೆಯಾಗಿದ್ದ 21 ಯುವಕರಲ್ಲಿ ಹಫೀಜ್ ಕೂಡ ಒಬ್ಬ. ಈ ಎಲ್ಲಾ ಯುವಕರೂ ಐಸಿಸ್ ಸಂಘಟನೆ ಸೇರಲು ಮನೆ ತೊರೆದಿದ್ದರೆನ್ನಲಾಗಿದೆ. ಇವರ ಪೈಕಿ ನಾಲ್ವರು ಮಹಿಳೆಯರು ಹಾಗೂ ಮೂವರು ಅಪ್ರಾಪ್ತರೂ ಒಳಗೊಂಡಿದ್ದಾರೆ. ಅಲ್ಲದೇ, 17 ಮಂದಿ ಕರ್ನಾಟಕ ಗಡಿಭಾಗದ ಕಾಸರಗೋಡಿನವರೇ ಆಗಿದ್ದಾರೆನ್ನಲಾಗಿದೆ.

ಹಫೀಜ್ ಮೃತಪಟ್ಟಿರುವ ವಿಚಾರವನ್ನು ಆಫ್ಘಾನಿಸ್ತಾನದ ಅಧಿಕಾರಿಗಳು ಟೆಲಿಗ್ರಾಂ ಮೂಲಕ ಕೇರಳದಲ್ಲಿರುವ ಆತನ ಕುಟುಂಬದವರಿಗೆ ತಿಳಿಸಿದ್ದಾರೆ. ಆದರೆ, ಭಾರತ ಸರಕಾರದ ವತಿಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಕಾಬೂಲ್'ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳು ಈ ಕುರಿತು ಅಧಿಕೃತ ಮಾಹಿತಿ ಪಡೆಯುವ ಪ್ರಯತ್ನದಲ್ಲಿದ್ದಾರೆಂದು ನ್ಯೂಸ್18 ವರದಿಯಲ್ಲಿ ತಿಳಿಸಲಾಗಿದೆ.