Asianet Suvarna News Asianet Suvarna News

ಕೇರಳದಲ್ಲೀಗ ಪ್ರವಾಹದ ಜೊತೆಗೆ ಮತ್ತೊಂದು ಆತಂಕ

ಕೇರಳದಲ್ಲಿ ಭಾರೀ ಪ್ರವಾಹದಿಂದ ತತ್ತರಿಸಿದ ಜನರಿಗೀಗ ಮತ್ತೊಂದು ಆತಂಕ ಎದುರಾಗಿದೆ. ಪ್ರವಾಹದ ಬಳಿಕ ಇದೀಗ ಪುನರ್ವಸತಿ ಹಾಗೂ ಸಾಂಕ್ರಾಮಿಕ ರೋಗಗಳ ಆತಂಕ ಮನೆ ಮಾಡಿದೆ. 

Kerala People Fear Of Contagious Disease
Author
Bengaluru, First Published Aug 21, 2018, 10:03 AM IST

ತಿರುವನಂತಪುರ/ಕೊಚ್ಚಿ: ಶತಮಾನದ ಭೀಕರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ಕೇರಳದಲ್ಲಿ ಈಗ ವರುಣನ ಅಬ್ಬರ ಸಂಪೂರ್ಣ ನಿಂತಿದೆ. ನೆರೆಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ ಶೇ.90 ಜನರ ರಕ್ಷಣಾ ಕಾರ್ಯವೂ ಮುಗಿದೆ. ಇದರ ಬೆನ್ನಲ್ಲೇ ಕೇರಳ ಸರ್ಕಾರ ಹಾಗೂ ಜನತೆಗೆ ಎರಡು ಪ್ರಮುಖ ಸವಾಲುಗಳು ಎದುರಾಗಿವೆ.

5600ಕ್ಕೂ ಹೆಚ್ಚು ಪರಿಹಾರ ಕೇಂದ್ರಗಳಲ್ಲಿ 10 ಲಕ್ಷ ಮಂದಿ ನೆಲೆಸಿದ್ದಾರೆ. ಅವರೆಲ್ಲರಿಗೂ ಪುನಾವಸತಿ ಕಲ್ಪಿಸುವುದು ಮೊದಲ ಸವಾಲಾದರೆ, ಎಲ್ಲೆಂದರಲ್ಲಿ ನಿಂತಿರುವ ನೀರಿನಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ನೋಡಿಕೊಳ್ಳಬೇಕಾದ ಸ್ಥಿತಿಯೂ ಸೃಷ್ಟಿಯಾಗಿದೆ.

ಈ ನಡುವೆ, ಭಾನುವಾರ ಒಟ್ಟು 13 ಶವಗಳು ಹೊಸದಾಗಿ ಪತ್ತೆಯಾಗಿವೆ. ಇದರಿಂದ ಆ.8ರಿಂದ 12 ದಿನಗಳ ಅವಧಿಯಲ್ಲಿ ಕೇರಳದ ಮಹಾಮಳೆಗೆ ಮೃತಪಟ್ಟವರ ಸಂಖ್ಯೆ 239ಕ್ಕೆ ಏರಿಕೆಯಾಗಿದೆ. ಮಳೆಗಾಲ ಆರಂಭವಾದ ಮೇ 29ರಿಂದ ಈವರೆಗೆ ಮಳೆ ಸಂಬಂಧಿ ಅನಾಹುತಗಳಲ್ಲಿ ಸಾವಿಗೀಡಾದವರ ಸಂಖ್ಯೆ 370ಕ್ಕೆ ಜಿಗಿದಿದೆ.

ಮಳೆ ನಿಂತ ಹಿನ್ನೆಲೆಯಲ್ಲಿ ಪರಿಹಾರ ಕಾರ್ಯಾಚರಣೆಗೆ ವೇಗ ಸಿಕ್ಕಿದೆ. ಮನೆಗಳ ಮೇಲೆ ನಿಂತು ಸಹಾಯ ಬೇಡುತ್ತಿರುವ, ರಕ್ಷಣಾ ತಂಡಗಳು ಹೋಗಲು ಆಗದ ಕಡೆ ಸಿಲುಕಿರುವ ಜನರನ್ನು ತಲುಪುವ ಸಲುವಾಗಿ ಡ್ರೋನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರವಾಹದಲ್ಲಿ ಸಿಲುಕಿದವರನ್ನು ಪರಿಪೂರ್ಣವಾಗಿ ರಕ್ಷಿಸುವ ಕೆಲಸಕ್ಕೆ ಸದ್ಯ ಆದ್ಯತೆ ನೀಡಲಾಗುತ್ತಿದೆ.

ನೆರೆ ಇಳಿದ ಸ್ಥಳಗಳಲ್ಲಿ ಮುಳುಗಡೆಯಾಗಿದ್ದ ಮನೆಗಳಿಂದ ಮಣ್ಣು, ಕಸ ತೆಗೆದು, ಅವನ್ನು ವಾಸಯೋಗ್ಯವನ್ನಾಗಿಸಲು ಶ್ರಮಿಸಲಾಗುತ್ತಿದೆ. ಕೇರಳ ಜಲ ಪ್ರಾಧಿಕಾರ ಹಾಗೂ ವಿದ್ಯುಚ್ಛಕ್ತಿ ಮಂಡಳಿಗಳು ಕುಡಿಯುವ ನೀರು ಹಾಗೂ ವಿದ್ಯುತ್‌ ಸರಬರಾಜು ಪೂರೈಕೆ ಪುನಾರಂಭಿಸಲು ಪ್ರಯತ್ನಿಸುತ್ತಿವೆ.

ವಿಮಾನ, ರೈಲು ಸಂಚಾರ ಶುರು:  ಪ್ರವಾಹದಿಂದಾಗಿ ಮುಚ್ಚಲ್ಪಟ್ಟಿದ್ದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬದಲಿಗೆ ಕೊಚ್ಚಿಯಲ್ಲೇ ಇರುವ ನೌಕಾ ಏರ್‌ಪೋರ್ಟ್‌ ಅನ್ನು ಪ್ರಯಾಣಿಕರ ಓಡಾಟಕ್ಕೆ ಬಳಸಿಕೊಳ್ಳಲಾಗುತ್ತಿದೆ. ಸೋಮವಾರದಿಂದ ಈ ವಿಮಾನ ನಿಲ್ದಾಣ ಸಾರ್ವಜನಿಕ ಸೇವೆಗೆ ಲಭ್ಯವಾಗುತ್ತಿದ್ದು, ಬೆಂಗಳೂರಿನಿಂದ ಮೊದಲ ವಿಮಾನ ಬಂದಿಳಿದಿದೆ.

ದೇಶದ ವಿವಿಧ ಭಾಗಗಳಿಂದ ಕೇರಳಕ್ಕೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಐಎನ್‌ಎಸ್‌ ದೀಪಕ್‌ ನೌಕೆ ಮುಂಬೈನಿಂದ 800 ಟನ್‌ ಕುಡಿಯುವ ನೀರು ಹಾಗೂ 18 ಟನ್‌ ಪಡಿತರ ಸಾಮಗ್ರಿಗಳನ್ನು ತಂದಿದೆ. ಬಾಜ್‌ರ್‍ಗಳ ಮೂಲಕ ಕುಡಿಯುವ ನೀರನ್ನು ತಲುಪಿಸಲಾಗುತ್ತಿದೆ. ಲಾರಿಗಳ ಸಹಾಯದಿಂದ ಪಡಿತರ ಮುಟ್ಟಿಸಲಾಗುತ್ತಿದೆ. ಕೇರಳದಲ್ಲಿನ ತೈಲ ಕೊರತೆ ನೀಗಿಸುವ ಸಲುವಾಗಿ 50 ಸಾವಿರ ಮೆಟ್ರಿಕ್‌ ಟನ್‌ ಕಚ್ಚಾತೈಲವನ್ನು ಮುಂಬೈನಿಂದ ಕೇರಳಕ್ಕೆ ಭಾರತ್‌ ಪೆಟ್ರೋಲಿಯಂ ಸಂಸ್ಥೆ ರವಾನಿಸಿದೆ. ತಿರುವನಂತಪುರದಿಂದ ಬೆಂಗಳೂರು, ಚೆನ್ನೈ, ಮುಂಬೈ ಹಾಗೂ ದೆಹಲಿಗೆ ರೈಲು ಸಂಚಾರವನ್ನು ಭಾಗಶಃ ಆರಂಭಿಸಲಾಗಿದೆ. ಬೆಂಗಳೂರಿನಿಂದಲೂ ತಂಡಗಳು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ.

Follow Us:
Download App:
  • android
  • ios