ನೆರೆಯ ಕೇರಳ ಮಾದರಿಯಲ್ಲಿ ರಾಜ್ಯದ ಎಂಡೋಸಲ್ಫಾನ್ ಪೀಡಿತರಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ವಿಧಾನಸಭೆಯಲ್ಲಿಂದು  ಆಶ್ವಾಸನೆ ನೀಡಿದ್ದಾರೆ. ಇಂದು ವಿಧಾನಸಭೆಯಲ್ಲಿ  ಬಿಜೆಪಿಯ ಸುನೀಲ್‌ಕುಮಾರ್, ಕೆ.ಜಿ.ಬೋಪಯ್ಯ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ವಿಷಯದ ಬಗೆಗೆ ನಡೆದ ಚರ್ಚೆಯ ಬಳಿಕ ಉತ್ತರ ನೀಡಿದ ರಮೇಶ್ ಕುಮಾರ್, ಅಮಾಯಕ ಜನರು ಎಂಡೋಸಲ್ಫಾನ್‌ಗೆ ಬಲಿಯಾಗುತ್ತಿರುವ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿ, ಗದ್ಗದಿತರಾದರು. 

ಬೆಂಗಳೂರು (ಜೂ.07): ನೆರೆಯ ಕೇರಳ ಮಾದರಿಯಲ್ಲಿ ರಾಜ್ಯದ ಎಂಡೋಸಲ್ಫಾನ್ ಪೀಡಿತರಿಗೆ ಪುನರ್ವಸತಿ ಮತ್ತು ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್ ವಿಧಾನಸಭೆಯಲ್ಲಿಂದು ಆಶ್ವಾಸನೆ ನೀಡಿದ್ದಾರೆ. ಇಂದು ವಿಧಾನಸಭೆಯಲ್ಲಿ ಬಿಜೆಪಿಯ ಸುನೀಲ್‌ಕುಮಾರ್, ಕೆ.ಜಿ.ಬೋಪಯ್ಯ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ವಿಷಯದ ಬಗೆಗೆ ನಡೆದ ಚರ್ಚೆಯ ಬಳಿಕ ಉತ್ತರ ನೀಡಿದ ರಮೇಶ್ ಕುಮಾರ್, ಅಮಾಯಕ ಜನರು ಎಂಡೋಸಲ್ಫಾನ್‌ಗೆ ಬಲಿಯಾಗುತ್ತಿರುವ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿ, ಗದ್ಗದಿತರಾದರು.
ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರ ಕಲ್ಪಿಸಲು ಜೂನ್ 1 ರಂದೇ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಬೇಕಾಗಿತ್ತು. ಕಾರಣಾಂತರಗಳಿಂದ ಈವರೆಗೆ ಭೇಟಿ ನೀಡಲಾಗಿಲ್ಲ. ಸದಸ್ಯರು ವ್ಯಕ್ತಪಡಿಸಿದ ಭಾವನೆಗಳಿಗೆ ಸೂಕ್ತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಅಧಿವೇಶನ ಮುಗಿದ ತಕ್ಷಣವೇ ಆ ಭಾಗದ ಎಲ್ಲ ಜನಪ್ರತಿನಿಧಿಗಳೊಂದಿಗೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ನೊಂದ ಜನರಿಗೆ ಅಗತ್ಯ ಎಲ್ಲ ನೆರವು ನೀಡುವ ನಿಟ್ಟಿನಲ್ಲಿ ಸದಸ್ಯರು ಪ್ರಸ್ತಾಪ ಮಾಡಿದಂತೆ ಕೇರಳ ರಾಜ್ಯದಲ್ಲಿ ಕೈಗೊಂಡಿರುವ ಪರಿಹಾರ ಯೋಜನೆಯ ಮಾಹಿತಿ ಪಡೆದು, ಅದನ್ನು ರಾಜ್ಯದಲ್ಲೂ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ದೇಶದಲ್ಲಿ ನಡೆದ ಭೂಪಾಲ್ ಅನಿಲ ದುರಂತವನ್ನು ಸರ್ಕಾರಗಳೂ ಕೂಡ ತಪ್ಪಿಸಲಾಗಲಿಲ್ಲ ಎಂಬುದು ದೌರ್ಭಾಗ್ಯದ ಸಂಗತಿ. ರಾಜ್ಯದಲ್ಲಿ ಎಂಡೋಸಲ್ಫಾನ್‌ನಂತಹ ಮಾರಕ ಔಷಧವನ್ನು ಬಳಕೆಗೆ ಅನುವು ಮಾಡಿಕೊಟ್ಟದ್ದೇ ದೊಡ್ಡ ಅಪರಾಧ. ವಿಜ್ಞಾನಿಗಳು, ಸರ್ಕಾರಗಳು, ಅಧಿಕಾರಿಗಳು ಇಂತಹ ಔಷಧಗಳ ಉತ್ಪಾದನೆ ಮತ್ತು ಮಾರಾಟಕ್ಕೆ ಹೇಗೆ ಅವಕಾಶ ಕೊಟ್ಟರು ಎಂದು ಯೋಚಿಸಿದಾಗ ತುಂಬಾ ಬೇಸರವಾಗುತ್ತದೆ. ಅಮಾಯಕ ಜನರ ಮುಂದಿನ ತಲೆಮಾರುಗಳು ಕೂಡ ಇದರ ಶಾಪದಿಂದ ಪರಿತಪಿಸಬೇಕಾಗುತ್ತದೆ. ಇಂತಹ ವ್ಯವಸ್ಥೆ ನೋಡಿದಾಗ ಸಚಿವ ಸ್ಥಾನದಲ್ಲಿ ಇರುವುದೇ ದೊಡ್ಡ ಶಿಕ್ಷೆ ಎನಿಸಿಬಿಟ್ಟಿದೆ. ಜನರಿಗೆ ಸರ್ಕಾರದ ಬಗೆಗೆ ವಿಶ್ವಾಸವೇ ಹೋಗಿದೆ ಎಂದು ಭಾಸವಾಗುತ್ತಿದೆ. ಅಪರಾಧಗಳ ಬಗೆಗೆ ಮಾತನಾಡುವ ನಾವೇ ಅಪರಾಧಿಗಳನ್ನು ರಕ್ಷಿಸುತ್ತಿದ್ದೇವೆ ಎಂಬಂತೆ ಭಾಸವಾಗುತ್ತಿದೆ ಎಂದು ಭಾವುಕರಾಗಿ ನುಡಿದರು. ಇದಕ್ಕೂ ಮೊದಲು ಮಾತನಾಡಿದ ಕಾರ್ಕಳ ಶಾಸಕ ಸುನೀಲ್‌ಕುಮಾರ್, ಎಂಡೋಸಲ್ಫಾನ್‌ನಿಂದ ಸುಮಾರು 25,000 ಕುಟುಂಬಗಳು ಬಳಲುತ್ತಿವೆ ಎಂದು ಸರ್ಕಾರಿ ದಾಖಲೆಗಳು ಹೇಳಿದ್ದರೂ ವಾಸ್ತವವಾಗಿ ಸುಮಾರು 10 ಸಾವಿರ ಕುಟುಂಬಗಳು ಈ ಶಾಪಕ್ಕೆ ತುತ್ತಾಗಿವೆ. ಈ ಕುಟುಂಬಗಳಿಗೆ ಪರಿಹಾರ ಧನ, ಮಾಸಾಶನ, ಪುನರ್ವಸತಿ ಮತ್ತು ಶುಶ್ರೂಷೆಗೆ ನರ್ಸ್‌ಗಳನ್ನು ನಿಯೋಜಿಸಿ, ವಿಶೇಷ ಅಂಬ್ಯುಲೆನ್ಸ್‌ಗಳ ಸೌಲಭ್ಯ ಒದಗಿಸಬೇಕು. ಅನೇಕರು ಕ್ಯಾನ್ಸರ್, ಹೃದ್ರೋಗ, ಅಂಗವಿಕಲತೆ, ಬುದ್ಧಿಮಾಂದ್ಯತೆ ಹಾಗೂ ನಪುಂಸಕತೆಯಿಂದ ಬಳಲುತ್ತಿದ್ದಾರೆ. ಪೀಡಿತರ ಕುಟುಂಬಗಳು ಚಿಕಿತ್ಸೆ ಪಡೆಯಲಾಗದೇ ಸಾಮೂಹಿಕ ಆತ್ಮಹತ್ಯೆಗೆ ಶರಣಾಗುತ್ತಿವೆ. ಈಗಾಗಲೇ ಇಂತಹ ಮೂರು ಪ್ರಕರಣಗಳು ದಾಖಲಾಗಿವೆ. ಕೇರಳದಿಂದ ಬ್ಯಾರೆಲ್‌ಗಟ್ಟಲೆ ಎಂಡೋಸಲ್ಫಾನ್ ತಂದು ರಾಜ್ಯದ ಗಡಿಯಲ್ಲಿ ಬಾವಿಗಳಿಗೆ ಎಸೆಯಲಾಗಿದೆ. ಇದರಿಂದ ಅನಾಹುತ ಇನ್ನಷ್ಟು ಹೆಚ್ಚುವ ಅಪಾಯ ಎದುರಾಗಿದ್ದು, ರಾಜ್ಯ ಸರ್ಕಾರ ಕೂಡಲೇ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದರು.
ಸುಳ್ಯ ಶಾಸಕ ಎಸ್.ಅಂಗಾರ ಮಾತನಾಡಿ, ರಾಜ್ಯ ಸರ್ಕಾರ ಎಂಡೋಸಲ್ಫಾನ್ ಪೀಡಿತರ ಕುಟುಂಬಗಳ ಮರುಸಮೀಕ್ಷೆ ನಡೆಸಬೇಕು. ಕೇರಳ ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೆ ೫ ಸಾವಿರ ರು. ಮಾಸಾಶನ ನೀಡಲಾಗುತ್ತಿದೆ. ರಾಜ್ಯದಲ್ಲೂ ಕೂಡ ಬಾಧಿತ ಕುಟುಂಬಗಳಿಗೆ ಮಾಸಾಶನ ಪ್ರಕಟಿಸಬೇಕು ಎಂದರು.
ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಾತನಾಡಿ, ಸರ್ಕಾರದ ಅಜಾಗರೂಕತೆಯಿಂದಾಗಿ ಗೊತ್ತು ಗುರಿ ಇಲ್ಲದೇ ಎಂಡೋಸಲ್ಫಾನ್ ಸಿಂಪರಣೆಯಿಂದ ಮುಂದಿನ ಐದು ತಲೆಮಾರುಗಳಿಗೆ ಇದರ ಪರಿಣಾಮ ಉಂಟಾಗಲಿದೆ ಎಂದು ವೈದ್ಯಕೀಯ ವರದಿಗಳು ಹೇಳಿವೆ. ಆ ಭಾಗದಲ್ಲಿ ಹಕ್ಕಿ, ಚಿಟ್ಟೆ ಹಾಗೂ ಜಾನುವಾರುಗಳು ಕೂಡ ಅಂಗವಿಕಲತೆಯಿಂದಲೇ ಜನಿಸುತ್ತಿವೆ. ಬಾಧಿತ ಕುಟುಂಬಗಳಿಗೆ ಕನಿಷ್ಠ 10 ಲಕ್ಷ ರೂ.ಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.