ತಿರುವನಂತಪುರಂ[ಜೂ.13]: ಜೀವನ ಶೈಲಿ ಅದೆಷ್ಟೇ ಬದಲಾದರೂ, ಆಧುನಿಕತೆಗೆ ಎಷ್ಟೇ ಒಗ್ಗಿಕೊಂಡರೂ, ಇಂದಿಗೂ  ಮರುಮದುವೆ ವಿರೋಧಿಸುವವರಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ಪುತ್ರ ತಾನೇ ಮುಂದೆ ನಿಂತು ತನ್ನ ತಾಯಿಗೆ ಪುನರ್ ವಿವಾಹ ಮಾಡಿಸಿದ್ದಾನೆ. ಬಳಿಕ ಫೇಸ್‍ಬುಕ್‍ನಲ್ಲಿ ಭಾವುಕ ಪತ್ರವೊಂದನ್ನು ಶೇರ್ ಮಾಡಿ ಆಕೆಗೆ ಶುಭಾಶಯ ಕೋರಿದ್ದಾನೆ. ಸದ್ಯ ಆತನ ಆ ಫೇಸ್ ಬುಕ್ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ. 

ಹೌದು ಕೇರಳದ ಕೊಲ್ಲಂ ಜಿಲ್ಲೆಯ 23 ವರ್ಷದ ಗೋಕುಲ್ ಶ್ರೀಧರ್ ಎಂಬಾತ ತನ್ನ ಅಮ್ಮನ ಪುನರ್‌ವಿವಾಹಕ್ಕೆ ಶುಭಾಶಯ ಕೋರಿದ್ದಾನೆ. ಇದೇ ವೇಳೆ ತನ್ನ ಅಮ್ಮ ಮಾಡಿದ ತ್ಯಾಗವನ್ನೂ ನೆನಪಿಸಿಕೊಂಡಿದ್ದಾನೆ. ಅಷ್ಟಕ್ಕೂ ಗೋಕುಲ್ ಬರೆದ ಪತ್ರದಲ್ಲೇನಿದೆ? ಇಲ್ಲಿದೆ ನೋಡಿ ವಿಬವರ

ನನ್ನನ್ನು ಹೆತ್ತು, ನನಗಾಗಿ ಜೀವನ ಸಾಗಿಸಿ, ನನ್ನ ಯಶಸ್ಸಿಗಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟ ನನ್ನ ತಾಯಿಗೆ ಏನೆಂದು ಹೇಳಲಿ? ಅವಳು ತನ್ನ ಮೊದಲ ಮದುವೆಯಿಂದ ಸಾಕಷ್ಟು ನೋವನುಭವಿಸಿದ್ದಾಳೆ. ಗಂಡನಿಂದ ಹೊಡೆಸಿಕೊಂಡು ತಲೆಯಿಂದ ರಕ್ತ ಸೋರುತ್ತಿದ್ದಾಗ, ನೀನ್ಯಾಕೆ ಇದನ್ನೆಲ್ಲಾ ಸಹಿಸಿಕೊಳ್ಳುತ್ತಿಯಾ? ಎಂದು ನಾನು ಆಕೆಯನ್ನು ಕೇಳಿದ್ದೆ. ಆಗ ಅಮ್ಮ ನಾನು ನಿನಗಾಗಿ ಬದುಕುತ್ತಿದ್ದೇನೆ. ಇದಕ್ಕಾಗೇ ನಾನು ಇದನ್ನೆಲ್ಲಾ ಸಹಿಸಿಕೊಳ್ಳುತ್ತಿದ್ದೇನೆ ಎಂದಿದ್ದಳು. ಅದನ್ನು ಕೇಳಿದಾಗ ನನ್ನ ಕಣ್ಣಲ್ಲಿ ಬೇಡವೆಂದರೂ ನೀರು ಉಕ್ಕುತ್ತಿತ್ತು

ಗಂಡನ ದಿನನಿತ್ಯದ ಕಿರುಕುಳದಿಂದ ಬೇಸತ್ತ ಅಮ್ಮ ಏಕಾಂಗಿಯಾಗಿ ಬದುಕಲು ತಯಾರಾದಾಗ ನಾನು 10ನೇ ತರಗತಿಯಲ್ಲಿದ್ದೆ. ಅಂದೇ ನಾನು ಅಮ್ಮನಿಗೆ ಮರು ವಿವಾಹ ಮಾಡಲು ನಿರ್ಧರಿಸಿದ್ದೆ. ಆಗ ನನ್ನ ತಾಯಿ ಶಿಕ್ಷಕಿಯಾಗಿದ್ದರು, ಆದರೀಗ ಅಮ್ಮ ಕೆಲಸ ಬಿಟ್ಟಿದ್ದಾರೆ. ಹೀಗಿರುವಾಗ ನಾನು ಉದ್ಯೋಗಕ್ಕಾಗಿ ದೂರ ಹೋದರೆ ಅಮ್ಮ ಒಬ್ಬಂಟಿಯಾಗುತ್ತಾಳೆ. ಆರಂಭದಲ್ಲೇ ತೆಗೆದುಕೊಂಡ ನಿರ್ಧಾರದಂತೆ ಅಮ್ಮನಿಗೆ ಪುನರ್‌ವಿವಾಹ ಆಗಲು ಹೇಳುತ್ತಿದ್ದೆ. ಆದರೆ ಅಮ್ಮ ಬೇಡವೆನ್ನುತ್ತಿದ್ದಳು. ಆಕೆಯ ಸಹೋದ್ಯೋಗಿ ಕಡೆಯಿಂದ ವಿವಾಹ ಸಂಬಂಧ ಬಂದಿತ್ತು. ಅಮ್ಮ ಮೊದಲು ಬೇಡ ಎಂದು ನಿರಾಕರಿಸಿದ್ದಳು. ಆದರೆ ಎಲ್ಲರೂ ಆಕೆಗೆ ಅರ್ಥೈಸಿ, ಒತ್ತಾಯಿಸಿದಾಗ ಒಪ್ಪಿಕೊಂಡಳು.

ಅಮ್ಮ ತನ್ನ ತಾರುಣ್ಯವನ್ನು ನನಗಾಗಿ ತ್ಯಾಗ ಮಾಡಿದಳು, ಆಕೆಗೆ ಅದೆಷ್ಟೋ ಕನಸುಗಳಿದ್ದವು, ಅದನ್ನೂ ನನಗಾಗಿ ಮರೆತಳು. ನಾನಿನ್ನು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಈ ವಿಚಾರವನ್ನು ಗುಟ್ಟಾಗಿಡುವುದು ನನಗಿಷ್ಟವಿಲ್ಲ. ಹ್ಯಾಪಿ ಮ್ಯಾರಿಡ್ ಲೈಫ್ ಅಮ್ಮಾ...

ಅಮ್ಮನ ಮೇಲಿರುವ ಮಗನ ಪ್ರೀತಿ, ತನಗಾಗಿ ಆಕೆ ಮಾಡಿದ ತ್ಯಾಗ ನೆನಪಿಸಿ ಆಕೆಯ ಮೊಗದಲ್ಲಿ ನಗು ಮೂಡಿಸಲು ಯತ್ನಿಸಿದ ಮಗನ ನಡೆಗೆ ನೆಟ್ಟಿಗರು ಸಲಾಂ ಎಂದಿದ್ದಾರೆ. ಸದ್ಯ ಗೋಕುಲ್ ಶ್ರೀಧರ್ ಪೋಸ್ಟ್ ಭಾರೀ ವೈರಲ್ ಆಗಿದೆ.