ತಿರುವನಂತಪುರ[ಆ.18]: ಕೇರಳದಲ್ಲಿ ಮಳೆಯ ಭೀಕರತೆ ಭಾರಿ ಅವಾಂತರ ಸೃಷ್ಟಿಸಿದ್ದು ಬಹುತೇಕ ಜಿಲ್ಲೆಗಳಲ್ಲಿ ಸೂರಿಲ್ಲದ ಜನರು ಪರಿತಪಿಸುತ್ತಿದ್ದಾರೆ.

ತೊಂದರೆಗೀಡಾದ ಎಲ್ಲ ಜಿಲ್ಲೆಗಳಲ್ಲಿ ಎನ್ ಡಿಆರ್ ಎಫ್ ಹಾಗೂ ನೌಕಾ ಸಿಬ್ಬಂದಿ ರಕ್ಷಣಾ ಕಾರ್ಯ ಮುಂದುವರಿಸಿದ್ದಾರೆ. 1924ರ ಬಳಿಕ ಇಷ್ಟು ಮಟ್ಟದಲ್ಲಿ ಸುರಿದ ಮಳೆ ಇದಾಗಿದೆ. ಜನಸಾಮಾನ್ಯರು ಮೃತ್ಯುವಿನ ಜೊತೆ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಇನ್ನೂ11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ 

ಈ ಮದ್ಯೆ ಇಂದು ಕೂಡ 169 ಎನ್ ಡಿಆರ್ ಎಫ್ ತಂಡ ನೆರೆ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು ತೊಂದರೆಯಲ್ಲಿರುವವರನ್ನು ಮೇಲೆತ್ತುವ ಹಾಗೂ ಸಂತ್ರಸ್ತರಿಗಾಗಿ ಆಹಾರ ಸಾಮಾಗ್ರಿಗಳನ್ನ ನೀಡಲಾಗುತ್ತಿದೆ. ಸಂತ್ರಸ್ತರಿಗೆ ಅನುಕೂಲವಾಗುವಂತೆ ಕೇರಳ ಸರ್ಕಾರಕ್ಕೆ ಹೆಚ್ಚುವರಿಯಾಗಿ, ಖಾಸಗಿ ವಿಮಾನ ಸಂಚಾರ ನಡೆಸುವಂತೆ ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶನ ನೀಡಿದೆ. ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 

ಈ ಮಧ್ಯೆ ಭಾರತೀಯ ರೈಲ್ವೆ ಕೂಡ ಸಂತ್ರಸ್ತರ ನೆರವಿಗೆ ಧಾವಿಸಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಉಚಿತವಾಗಿ ಸಾಮಾನು ಸರಂಜಾಮು ರವಾನಿಸಲು ನಿರ್ಧರಿಸಿದೆ. ರೌದ್ರ ಮಳೆಗೆ ನಲುಗಿರುವ ಕೇರಳದ ಜನತೆಗೆ ದೇಶದ ವಿವಿಧಡೆಯಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.