ತಿರು​ವ​ನಂತ​ಪು​ರಂ[ಆ.14]: ದೇವರ ನಾಡಿನಲ್ಲಿ ವರು​ಣನ ತಾಂಡವ ಮುಂದು​ವ​ರಿ​ದಿದ್ದು, ಮತ್ತೆ ಮೂರು ಜಿಲ್ಲೆ​ಗ​ಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡ​ಲಾ​ಗಿದೆ. ರಾಜ್ಯದ ಉತ್ತರ ಭಾಗ​ದಲ್ಲಿ ಮಳೆ ಆರ್ಭಟ ಕಡಿ​ಮೆ​ಯಾ​ಗು​ತ್ತಿ​ದ್ದಂತೆ, ಮಧ್ಯ ಕೇರ​ಳ​ದಲ್ಲಿ ಭಾರೀ ಮಳೆ​ಯಾ​ಗು​ತ್ತಿದ್ದು ಆಲಪ್ಪುಳ, ಎರ್ನಾ​ಕುಲಂ, ಕೊಚ್ಚಿ ಸೇರಿ 5 ಜಿಲ್ಲೆ​ಗ​ಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡ​ಲಾ​ಗಿದೆ.

ಮಲ​ಪ್ಪುರಂ ಹಾಗೂ ಕೋಯಿಕ್ಕೋಡ್‌ನಲ್ಲಿ ರೆಡ್‌ ಅಲರ್ಟ್‌ ಮುಂದು​ವ​ರಿ​ದಿದ್ದು, ಕೊಲ್ಲಂ, ಪಟ್ಟಣಂತಿಟ್ಟ, ಕೊಟ್ಟಾಯಂ, ಪಾಲ​ಕ್ಕಾಡ್‌ ಹಾಗೂ ತ್ರಿಶ್ಶೂರ್‌ ಜಿಲ್ಲೆ​ಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡ​ಲಾ​ಗಿ​ದೆ. ಬಂಗಾ​ಳ​ ಕೊಲ್ಲಿ​ಯಲ್ಲಿ ವಾಯು​ಭಾರ ಕುಸಿತದಿಂದ ಮಳೆಯ ಪ್ರಮಾಣ ಹೆಚ್ಚಾ​ಗು​ತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆ ಮಾಡಿ​ರುವ ಜಿಲ್ಲೆ​ಗ​ಳಲ್ಲಿ 20 ಸೆಂ.ಮಿ ಮಳೆ​ಯಾ​ಗುವ ಸಾಧ್ಯತೆ ಇದೆ ಎಂದು ಹವ​ಮಾನ ಇಲಾ​ಖೆ ಮುನ್ಸೂ​ಚನೆ ನೀಡಿದೆ.

ರಣ​ಭೀ​ಕರ ಮಳೆ ರಾಜ್ಯಾ​ದ್ಯಂತ ಈ ವರೆಗೆ 90 ಮಂದಿ​ಯನ್ನು ಬಲಿ ಪಡೆ​ದು​ಕೊಂಡಿದ್ದು, 40 ಮಂದಿ ಕಣ್ಮ​ರೆ​ಯಾ​ಗಿ​ದ್ದಾರೆ. ರಾಜ್ಯಾ​ದ್ಯಂತ 1,332 ಕಾಳಜಿ ಕೇಂದ್ರ​ಗ​ಳಲ್ಲಿ 2.52 ಲಕ್ಷ ಜನ ಆಶ್ರಯ ಪಡೆ​ದು​ಕೊಂಡಿ​ದ್ದಾರೆ. ವಯ​ನಾಡ್‌, ಮಲ​ಪ್ಪುರಂ ಹಾಗೂ ಕೋಝಿ​ಕ್ಕೋಡ್‌ ಜಿಲ್ಲೆ​ಗ​ಳಲ್ಲಿ ಗುಡ್ಡ ಕುಸಿ​ತ​ದಿಂದ ಹೆಚ್ಚು ಹಾನಿ ಸಂಭ​ವಿ​ಸಿದ್ದು, ರಕ್ಷಣಾ ಕಾರ್ಯಾ​ಚ​ರಣೆ ಇನ್ನೂ ಪ್ರಗ​ತಿ​ಯ​ಲ್ಲಿ​ವೆ. ನೆರೆ ಪೀಡಿತ ಪ್ರದೇ​ಶ​ಗ​ಳಿಗೆ ಮುಖ್ಯಮಂತ್ರಿ ಪಿಣ​ರಾ​ಯಿ ವಿಜ​ಯನ್‌ ಸಹಿತ ಸಂಪುಟ ಸದ​ಸ್ಯರು ಭೇಟಿ ನೀಡಿ ಸಂತ್ರ​ಸ್ತರಿಗೆ ಧೈರ್ಯ ತುಂಬಿ​ದ್ದು, ಸರ್ಕಾರ​ದಿಂದ ಎಲ್ಲಾ ನೆರವು ನೀಡ​ಲಾ​ಗು​ವುದು ಎಂದು ಅಭಯ ನೀಡಿ​ದ್ದಾರೆ.