ತಿರುವನಂತಪುರಂ :  ಕೇರಳದಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ವಿವಿಧೆಡೆಯಿಂದ ಅತ್ಯಧಿಕ ಪ್ರಮಾಣದಲ್ಲಿ ನೆರವಿನ ಹಸ್ತ ಹರಿದು ಬಂದಿದೆ. 

ಇದೇ ವೇಳೆ  ಕೇರಳಕ್ಕೆ ಯುಎಇ ಕೂಡ 700 ಕೋಟಿ ನೆರವು ನೀಡುವುದಾಗಿ ಹೇಳಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಯುಎಇ ಸರ್ಕಾರ ಸ್ಪಷ್ಟನೆ ನೀಡಿದ್ದು ನಾವು ಅಧಿಕೃತವಾಗಿ ಯಾವುದೇ ರೀತಿಯಾಗಿ ಹಣವನ್ನು ನೀಡುವುದಾಗಿ ಘೋಷಣೆ ಮಾಡಲಿಲ್ಲ ಎಂದು  ಹೇಳಿದೆ. 

ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತುರ್ತು ಸಮಿತಿಯು ಮಾಹಿತಿ ನೀಡಿದ್ದು ಸೂಕ್ತ ನೆರವು ನೀಡುವ ಬಗ್ಗೆ ಚರ್ಚಿಸಲಾಗಿತ್ತು ಎಂದು ಹೇಳಿದೆ. ಸೂಕ್ತ ನೆರವು ನೀಡಲು ಸಿದ್ಧವಾಗಿದ್ದು ಆದರೆ ಹಣದ ಪ್ರಮಾಣದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂದು ಯುಎಇ ರಾಯಭಾರಿ ಅಹಮದ್ ಅಲ್ಬಾನ ಹೇಳಿದ್ದಾರೆ. ಆದರೆ 700 ಕೋಟಿ ಎಂದು ನಿರ್ಧಿಷ್ಟ ಮೊತ್ತ ಘೋಷಣೆ ಮಾಡಲಿಲ್ಲ ಎಂದಿದ್ದಾರೆ. 

ಆದರೆ ಕಳೆದ ಆಗಸ್ಟ್ 21 ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಟ್ವಿಟರ್ ಖಾತೆಯಲ್ಲಿ ಯುಎಇ 700 ಕೋಟಿ ನೆರವು ನೀಡುವುದಾಗಿ ಹೇಳಿದ್ದು, ಧನ್ಯವಾದ ಎಂದು ಬರೆದುಕೊಂಡಿದ್ದರು. 

ಯುಎಇ  ಮಹರಾಜ ಶೇಖ್ ಮೊಹಮ್ಮದ್ ಬಿನ್ ಝಯೀದ್ ಅಲ್ ನಯಾನ್ ಕೇರಳ ಪ್ರವಾಹಕ್ಕೆ ಪರಿಹಾರದ ಮೊತ್ತವಾಗಿ 700 ಕೋಟಿ  ನೀಡುವುದಾಗಿ ಹೇಳಿದ್ದಾರೆ ಎಂದು ಪಿಣರಾಯಿ ವಿಜಯನ್ ಹೇಳಿದ್ದರು. ಆದರೆ ಇದನ್ನು ಯುಎಇ ಸದ್ಯ ನಿರಾಕರಿಸಿ, ನಿರ್ದಿಷ್ಟ ಮೊತ್ತದ ಬಗ್ಗೆ ಯಾವುದೇ ಘೋಷಣೆ ಮಾಡಲಿಲ್ಲ ಎಂದಿದೆ.