ನವದೆಹಲಿ (ಅ.05): ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಪ್ರಶ್ನೆಗಳು ಏಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ನಾಯಕ ಪಿ.ಸಿ.ಚಾಕೋ ಆಗ್ರಹಿಸಿದ್ದಾರೆ.
ಸರ್ಜಿಕಲ್ ದಾಳಿ ಬಗ್ಗೆ ಕಾಂಗ್ರೆಸ್ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್’ಗೆ ಆ ಬಗ್ಗೆ ಯಾವುದೇ ಸಂಶಯಗಳಿಲ್ಲ. ಈ ವಿಚಾರದಲ್ಲಿ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ, ಎಂದು ಚಾಕೋ ಹೇಳಿದ್ದಾರೆ.
ಸರ್ಜಿಕಲ್ ದಾಳಿಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸುವುದು ಸರಿಯಲ್ಲ. ಸರ್ಜಿಕಲ್ ದಾಳಿಯನ್ನು ರಾಜಕೀಯ ಲಾಭ ಪಡೆಯಲು ಬಳಸಿದಾಗ ಗೊಂದಲವುಂಟಾಗುತ್ತದೆ. ಕೇಜ್ರೀವಾಲ್ ಮತ್ತಿತರು ಕೇಳುತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ನೀಡಿ ಅವರ ಗೊಂದಲ ಪರಿಹರಿಸಬೇಕು, ಎಂದು ಚಾಕೋ ಹೇಳಿದ್ದಾರೆ.
ಸರ್ಜಿಕಲ್ ದಾಳಿಗೆ ಕೇಂದ್ರ ಸರ್ಕಾರ ಪುರಾವೆ ಒದಗಿಸಬೇಕೆಂದು ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್, ಚಿದಂಬರಂ, ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳೆದ ದಿನಗಳಲ್ಲಿ ಆಗ್ರಹಿಸಿದ್ದರು.
