ಕರ್ನಾಟಕ,ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕಾಂಗ್ರೆಸ್ ನಾಯಕರಿಂದ ಪಕ್ಷದ ಹಿರಿಯ ನಾಯಕರಿಗೆ ಮನವಿ ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ಮೋದಿ ಅವರನ್ನು ನೀಚ ಎಂದು ಟೀಕಿಸಿ ವಿವಾದ ಸೃಷ್ಟಿಸಿದ್ದ ಮಣಿಶಂಕರ್ ಅಯ್ಯರ್

ಅಹಮದಾಬಾದ್: ಅಯ್ಯರ್ ಹೇಳಿಕೆ ಗುಜರಾತ್ ಚುನಾವಣೆಯಲ್ಲಿ ಪಕ್ಷಕ್ಕೆ ವ್ಯತಿರಿಕ್ತ ಪರಿಣಾಮ ತಂದಿರುವ ಹಿನ್ನೆಲೆಯಲ್ಲಿ, ನಮ್ಮ ರಾಜ್ಯಗಳ ಚುನಾವಣೆ ವೇಳೆ ಅಯ್ಯರ್ ಅವರನ್ನು ಆದಷ್ಟು ದೂರ ಇಡುವುದು ಒಳಿತು ಎಂದು ಸಭೆಯಲ್ಲಿ ಭಾಗಿಯಾಗಿದ್ದ ಕರ್ನಾಟಕ,ಮಧ್ಯಪ್ರದೇಶ ಮತ್ತು ರಾಜಸ್ಥಾನದ ಕಾಂಗ್ರೆಸ್ ನಾಯಕರು, ಪಕ್ಷದ ಹಿರಿಯ ನಾಯಕರಿಗೆ ಮನವಿ ಮಾಡಿದ್ದಾರೆ.

ಸಾರ್ವಜನಿಕ ಸಮಾರಂಭಗಳ ವೇಳೆ ಅಯ್ಯರ್ ಮತ್ತು ಅವರದ್ದೇ ರೀತಿಯ ನಾಯಕರು, ಪಕ್ಷಕ್ಕೆ ಕಂಟಕ ತರುವ ರೀತಿಯ ಹೇಳಿಕೆ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂಬ ಮನವಿಯನ್ನೂ ಈ ರಾಜ್ಯಗಳ ನಾಯಕರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಯ್ಯರ್ ಬಿಜೆಪಿ ಏಜೆಂಟ್: ಗುಜರಾತ್ ಚುನಾವಣೆಯ ವೇಳೆ ಪ್ರಧಾನಿ ಮೋದಿ ಅವರನ್ನು ನೀಚ ಎಂದು ಟೀಕಿಸಿ ವಿವಾದ ಸೃಷ್ಟಿಸಿದ್ದ ಮಣಿಶಂಕರ್ ಅಯ್ಯರ್ ಅವರೊಬ್ಬ ಬಿಜೆಪಿ ಏಜೆಂಟ್.

ಚುನಾವಣೆಯಲ್ಲಿ ಗೆಲ್ಲುವ ಅವಕಾಶವನ್ನು ಹಾಳು ಮಾಡುವ ಉದ್ದೇಶದಿಂದ ಬಿಜೆಪಿ ಮಣಿಶಂಕರ್ ಅವರನ್ನು ಕಳುಹಿಸಿದೆ ಎಂದು ಕಾಂಗ್ರೆಸ್ ಮುಖಂಡ ಅಲ್ಪೇಶ್ ಠಾಕೂರ್ ಟೀಕಿಸಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ಪರಾಮರ್ಶೆ ಸಭೆಯಲ್ಲಿ ಅಲ್ಪೇಶ್ ಈ ಆರೋಪ ಮಾಡಿದ್ದಾರೆ.