ಬಿಜೆಪಿ-ಕಾಂಗ್ರೆಸ್ ಹೊರತಾದ ಮಹಾಮೈತ್ರಿಗೆ ಕೆಸಿಆರ್ ಮುಂದು| ದೇಶದ ಪ್ರಮುಖ ಪ್ರಾದೇಶಿಕ ಪಕ್ಷಗಳೊಂದಿಗೆ ಮಾತುಕತೆಗೆ ಸಿದ್ಧ| ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರೊಂದಿಗೆ ಕೆಸಿಆರ್ ಮಾತುಕತೆ|ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರೊಂದಿಗೆ ಭೇಟಿ ಸಾಧ್ಯತೆ| ಕೇಂದ್ರದಲ್ಲಿ ಪ್ರಾದೇಶಿಕ ಪಕ್ಷಗಳ ಸರ್ಕಾರ ರಚನೆಗೆ ಕೆಸಿಆರ್ ಭರ್ಜರಿ ಪ್ಲ್ಯಾನ್
ಭುವನೇಶ್ವರ್(ಡಿ.24): ತೆಲಂಗಾಣದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಟಿಆರ್ ಎಸ್ ಮುಖ್ಯಸ್ಥ ಕೆ.ಸಿ. ಚಂದ್ರಶೇಖರ್ ರಾವ್, ತಾವು ರಾಷ್ಟ್ರ ರಾಜಕಾರಣದತ್ತ ದೃಷ್ಟಿ ನೆಟ್ಟಿರುವುದಾಗಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
ಅದರಂತೆ ಇದೀಗ ಕೆಸಿಆರ್, ಬಿಜೆಪಿ-ಕಾಂಗ್ರೆಸ್ ಹೊರತಾದ ಮಹಾಮೈತ್ರಿಗೆ ಮುಂದಾಗಿದ್ದಾರೆ. ದೇಶಾದ್ಯಂತ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ದೆಹಲಿ ಗದ್ದುಗೆ ವಶಕ್ಕೆ ಪಡೆಯುವ ಯೋಜನೆ ಕೆಸಿಆರ್ ಅವರದ್ದಾಗಿದೆ.
ದೆಹಲಿಯಲ್ಲಿ ಬಿಜೆಪಿ-ಕಾಂಗ್ರೆಸ್ ಹೊರತಾದ ಸರ್ಕಾರದ ಕನಸು ಕಾಣುತ್ತಿರುವ ಕೆಸಿಆರ್, 2019ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಭರ್ಜರಿ ತಯಾರಿ ನಡೆಸಿದ್ದಾರೆ.
ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಇಂದು ಕೆಸಿಆರ್, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಇಲ್ಲಿಂದ ಪ.ಬಂಗಾಳಕ್ಕೆ ಹೊರಡಲಿರುವ ಕೆಸಿಆರ್, ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಅಲ್ಲದೇ ಎಸ್‌ಪಿ ಮತ್ತು ಬಿಎಸ್ ಪಿ ಸೇರಿದಂತೆ ಇತರ ಪ್ರಮುಖ ಪ್ರಾದೇಶಿಕ ಪಕ್ಷಗಳೊಂದಿಗೆ ಕೆಸಿಆರ್ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
