ಶಂಕರ್ ನಾಗ್ ಪುತ್ರಿ ಈಗೇನು ಮಾಡ್ತಾ ಇದ್ದಾರೆ ಗೊತ್ತಾ? ತಂದೆಯಂತೆಯೇ ಮಗಳೂ ಅಚ್ಚರಿ ಮೂಡಿಸಿದ್ದಾಳೆ!

First Published 11, Jan 2018, 11:21 AM IST
Kavya Shankarnag
Highlights

ಈಕೆ ಕನ್ನಡ ಚಿತ್ರರಂಗದ ದಂತಕತೆ ಶಂಕರ್'ನಾಗ್ ಹಾಗೂ ಅರುಂಧತಿ ಅವರ ಮಗಳು. ಹೆಸರು ಕಾವ್ಯಾನಾಗ್.

ಬೆಂಗಳೂರು (ಜ.11): ಈಕೆ ಕನ್ನಡ ಚಿತ್ರರಂಗದ ದಂತಕತೆ ಶಂಕರ್'ನಾಗ್ ಹಾಗೂ ಅರುಂಧತಿ ಅವರ ಮಗಳು. ಹೆಸರು ಕಾವ್ಯಾನಾಗ್.

ಅಪ್ಪ, ಅಮ್ಮನ ಹಾಗೆ ಸಿನಿಮಾ, ರಂಗಭೂಮಿಗಳಲ್ಲಿ ಕಾಣಿಸಿಕೊಂಡವರಲ್ಲ. ಹಾಗಾದ್ರೆ ಕಾವ್ಯಾ ಯಾವ ವೃತ್ತಿಯಲ್ಲಿದ್ದಾರೆ?  ತೆಂಗಿನೆಣ್ಣೆ ಉತ್ಪಾದನೆ ಹಾಗೂ ಮಾರಾಟ ಮಾಡ್ತಿದ್ದಾರೆ ! ಹೌದು, ಶಂಕರ್‌ನಾಗ್ ಮಗಳು ‘ಕೋಕೋನೆಸ್’ ಎಂಬ ಸಂಸ್ಥೆಯ ಮೂಲಕ ಪರಿಶುದ್ಧ ತೆಂಗಿನ ಹಾಲಿನ ಎಣ್ಣೆಯನ್ನು  ತಯಾರಿಸುತ್ತಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಇವರ ಕೋಕೋನೆಸ್ ತೆಂಗಿನ ಹಾಲು ಉತ್ಪಾದಕ ಘಟಕವಿದೆ. ಇಲ್ಲಿ ಉತ್ಪತ್ತಿಯಾಗುವ ಶುದ್ಧ ತೆಂಗಿನ ಎಣ್ಣೆ ಅಥವಾ ವರ್ಜಿನ್ ಆಯಿಲ್ ಬೆಂಗಳೂರಿನ ಆರ್ಗ್ಯಾನಿಕ್ ಶಾಪ್‌ಗಳಲ್ಲಿ, ಕೊಕೊನೆಸ್ ವೆಬ್‌ಸೈಟ್, ಅಮೆಜಾನ್‌ನಂಥ ಆನ್‌ಲೈನ್ ತಾಣಗಳಲ್ಲಿ ಮಾರಾಟವಾಗುತ್ತದೆ.

ಕಾವ್ಯಾ ಸಿನಿಮಾಕ್ಯಾಕೆ ಬರಲಿಲ್ಲ?

ಮೊದಲನೆ ಕಾರಣ ಆಸಕ್ತಿ ಇಲ್ಲ. ಕಾವ್ಯಾ ಅಮ್ಮ ಅರುಂಧತಿ ಅವರ ರಂಗಭೂಮಿ ಚಟುವಟಿಕೆಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ನಾಟಕಗಳನ್ನು ನೋಡೋದಕ್ಕೂ ಇಷ್ಟ ಇದೆ. ಆದರೆ ಪಾತ್ರ ಮಾಡೋದು, ರಂಗ ಚಟುವಟಿಕೆ, ಸಿನಿಮಾ ಮೊದಲಾದ ಕ್ಷೇತ್ರಗಳು ಅಷ್ಟಕ್ಕಷ್ಟೇ. ಕಾವ್ಯಾ ಓದಿದ ಸಬ್ಜೆಕ್ಟ್ ವೈಲ್ಡ್‌ಲೈಫ್ ಬಯಾಲಜಿ. ಜೀವವಿಜ್ಞಾನ, ವನ್ಯಜೀವಿಗಳ ಬಗ್ಗೆ ಅಗಾಧ ಆಸಕ್ತಿ ಇವರಿಗಿದೆ. ತನಗೆ ಅಭಿರುಚಿ ಇರುವ ಕ್ಷೇತ್ರದಲ್ಲಿ ಮುಂದುವರಿಯಬೇಕು  ಅನ್ನುವ ಇಂಗಿತ ಇವರದು.

ತೆಂಗಿನ ಎಣ್ಣೆ ಉತ್ಪಾದನೆಯ ಯೋಚನೆ ಬಂದಿದ್ದು ಹೀಗೆ ..

ಸದ್ಯಕ್ಕೀಗ ಕಾವ್ಯಾ ಕೋಕೋನೆಸ್‌ನ ಚಟುವಟಿಕೆಗಳಲ್ಲಿ ಬ್ಯುಸಿ. ‘ನಮ್ಮ ನೆಲದಲ್ಲಿ ತೆಂಗು ಹೇರಳವಾಗಿದೆ. ಆದರೆ ಇದನ್ನು ಸರಿಯಾಗಿ ಬಳಸುವಲ್ಲಿ ನಾವು ಸೋತಿದ್ದೇವೆ. ನಮ್ಮ ಪರಂಪರೆಯ ಜ್ಞಾನಕ್ಕೂ ಗುಡ್‌ಬೈ ಹೇಳಿ ವಿದೇಶಿ ಪ್ರಾಡಕ್ಟ್‌ಗಳ ಮೇಲೆ ಅವಲಂಬಿತರಾಗಿದ್ದೇವೆ. ನಮ್ಮ ನೆಲದ ಸಂಪನ್ಮೂಲ ಮತ್ತು ಜ್ಞಾನವನ್ನು ಮುಂದುವರಿಸಿ ಜನರಿಗೆ ಅದರ ಉಪಯೋಗದ ಕುರಿತು ಮನವರಿಕೆ ಮಾಡಿಕೊಡಬೇಕು ಅನ್ನುವ ಕಾರಣಕ್ಕೆ ಕೋಕೋನೆಸ್ ಆರಂಭಿಸಿದೆ’ ಎನ್ನುತ್ತಾ ತಾವು ಕೋಕೋನೆಸ್ ಆರಂಭಿಸಿದ ಉದ್ದೇಶವನ್ನು ವಿವರಿಸುತ್ತಾರೆ ಕಾವ್ಯಾ. ಮೊದಲು ಈ ವರ್ಜಿನ್ ಆಯಿಲ್

ಬಗ್ಗೆ ಇವರಿಗೆ ತಿಳಿದೇ ಇರಲಿಲ್ಲವಂತೆ. ವಿಷಯ ತಿಳಿದಾಗ ಈ ತೆಂಗಿನ ಎಣ್ಣೆಯ ಬಗ್ಗೆ ಕುತೂಹಲ ಹುಟ್ಟಿ ಅದೆಲ್ಲಿ ಸಿಗುತ್ತೆ ಅಂತ ನೋಡಿದರೆ ಅದು ಕೇವಲ ಫಿಲಿಫೈನ್ಸ್‌ನಲ್ಲಷ್ಟೇ ಉತ್ಪಾದನೆಯಾಗುತ್ತೆ ಅನ್ನೋದು ಗೊತ್ತಾಯಿತು. ಹಾಗೆ ನೋಡಿದರೆ ನಮ್ಮ ಪರಂಪರೆಯಲ್ಲಿ 2000 ವರ್ಷಗಳ ಹಿಂದೆಯೇ ಈ ತೆಂಗಿನ ಹಾಲಿನ ಬಳಕೆ ಇತ್ತು. ಆದರೆ ಈಗ ಜನರಿಗೆ ಜ್ಞಾನವೂ ಇಲ್ಲ. ಇದರ ಬಳಕೆಯೂ ಗೊತ್ತಿಲ್ಲ. ಹಾಗಾಗಿ ನಮ್ಮ ಜನಕ್ಕೆ ನಮ್ಮ ನೆಲದ ಆರೋಗ್ಯಕರ ಪರಂಪರೆಯ ಬಗ್ಗೆ ತಿಳಿಯಪಡಿಸಬೇಕು ಅನ್ನೋ ಉದ್ದೇಶದಿಂದ ವರ್ಜಿನ್ ಎಣ್ಣೆಯನ್ನು ಉತ್ಪಾದಿಸುವ ಯೋಚನೆ ಕಾವ್ಯಾಗೆ ಬಂತು.

ಕೋಕೋನೆಸ್ ಶುರುವಾಯ್ತು

ತೆಂಗಿನ ಎಣ್ಣೆ ಉತ್ಪಾದಿಸುವ ನಿಟ್ಟಿನಲ್ಲಿ ‘ಕೋಕನಟ್ ಡೆವಲಪ್'ಮೆಂಟ್ ಬೋರ್ಡ್’ಗೆ ಹೋಗಿ ಅವರಿಂದ ಮಾಹಿತಿ ಪಡೆದುಕೊಂಡರು. ಬೆಂಗಳೂರು ಹೊರವಲಯದಲ್ಲಿ ಕಾವ್ಯಾನಾಗ್ ಅವರ ತೋಟದಲ್ಲಿ ಪ್ರಾಯೋಗಿಕವಾಗಿ ತೆಂಗಿನ ಎಣ್ಣೆ ಉತ್ಪಾದನೆ ಶುರುವಾಯ್ತು. ಬಳಿಕ ಸ್ವಲ್ಪ ವಿಸ್ತರಿಸಿದರು.  ಈಗ ‘ಕೋಕೋನೆಸ್’ನ ತುಸು ದೊಡ್ಡ ಘಟಕ ಕಾರ್ಯನಿರ್ವಹಿಸುತ್ತಿದೆ. ತೆಂಗಿನ ಎಣ್ಣೆಯಲ್ಲದೇ ತೆಂಗಿನ ಉಪ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಈ ಉತ್ಪನ್ನಗಳಿಗೂ ಅತ್ಯುತ್ತಮ ಜನಸ್ಪಂದನೆ ಇದೆ

ವರ್ಜಿನ್ ಆಯಿಲ್ ಅಂದ್ರೇನು?

ವರ್ಜಿನ್ ಆಯಿಲ್ ಅಂದರೆ ತೆಂಗಿನ ಎಣ್ಣೆ. ನಾವೀಗ ಅಡುಗೆಗೆ, ಕೂದಲಿಗೆ ಹಚ್ಚಿಕೊಳ್ಳಲು ಬಳಸೋದು ಕೊಬ್ಬರಿ ಎಣ್ಣೆ. ತೆಂಗಿನ ಹಾಲಿನಿಂದ ತಯಾರೋದು ತೆಂಗಿನ ಎಣ್ಣೆ. ತೆಂಗಿನ ಕಾಯನ್ನು ತುರಿದು ವಿವಿಧ ಹಂತಗಳಲ್ಲಿ ಸಂಸ್ಕರಿಸಿ ತೆಂಗಿನ ಹಾಲಿನ ಎಣ್ಣೆ ತಯಾರಿಸುತ್ತಾರೆ. ಇದರಲ್ಲಿ ಅನೇಕ ಪ್ರಯೋಜನಗಳಿವೆ. ಸೋರಿಯಾಸಿಸ್, ಎಕ್ಸಿಮಾದಂಥ ಸಮಸ್ಯೆಗೆ ಈ ಎಣ್ಣೆ ರಾಮಬಾಣ. ಹಾಸಿಗೆ ಹಿಡಿದ ರೋಗಿಗಳಿಗೆ ಮಲಗಿದಲ್ಲೇ ಮಲಗಿ ಮೈಯಲ್ಲಿ ಹುಣ್ಣುಗಳಾದರೆ ಈ ಎಣ್ಣೆ ಗುಣಪಡಿಸುತ್ತದೆ. ಕಾವ್ಯಾ ಅವರ ಕೋಕೋನೆಸ್‌ನಿಂದ ಎಳೆಯ ಮಕ್ಕಳಿಗೆ, ಬಾಣಂತಿಯರಿಗೆ, ಸ್ನಾನದ ಬಳಕೆಗೆಲ್ಲ ಪ್ರತ್ಯೇಕ ಎಣ್ಣೆಗಳನ್ನು ತಯಾರಿಸುತ್ತಾರೆ.

 

loader