ಇಸ್ಲಾಮಾಬಾದ್(ಆ.15): 'ಭಾರತ ಆಕ್ರಮಿತ ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಪ್ರತಿಯೊಬ್ಬ ಪಾಕಿಸ್ತಾನಿ ಬಲಿದಾನಕ್ಕೆ ಸಿದ್ದವಿದ್ದು, ಕಾಶ್ಮೀರಿ ಜನರ ಮೇಲೆ ಭಾರತ ನಡೆಸುತ್ತಿರುವ ದೌರ್ಜನ್ಯಕ್ಕೆ ಇತಿಶ್ರೀ ಹಾಡುವ ಸಮಯ ಸನ್ನಿಹಿತವಾಗಿದೆ.....' ಇದು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮಾಡಿದ ಭಾಷಣದ ಪರಿ.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಮೋದಿ ಸರ್ಕಾರದ ನಿರ್ಧಾರವನ್ನು ಟೀಕಸಿರುವ ಇಮ್ರಾನ್ ಖಾನ್, ಇದರಿಂದ ಕಾಶ್ಮೀರಿಗರ ಮೇಲೆ ದೌರ್ಜನ್ಯ ಮತ್ತಷ್ಟು ಹೆಚ್ಚಲಿದೆ ಎಂದು ಗುಡುಗಿದ್ದಾರೆ.

ಭಾರತದ ಪ್ರಧಾನಿ ಮೋದಿ ಅವರ ಈ ಅಂತಿಮ ಆಟ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಲಿದ್ದು, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಭಾರತದ ವಿರುದ್ಧ ಯುದ್ಧ ಸಾರಲು ಪಾಕಿಸ್ತಾನ ಸಿದ್ಧವಿದೆ ಎಂದು ಇಮ್ರಾನ್ ಖಾನ್ ಘೋಷಿಸಿದ್ದಾರೆ.

ಇದೇ ವೇಳೆ RSS ಸಿದ್ಧಾಂತವನ್ನು ಟೀಕಿಸಿರುವ ಇಮ್ರಾನ್, ಕಾಶ್ಮೀರದಲ್ಲಿ ಮತ್ತು ಗುಜರಾತ್‌ನಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುತ್ತಿರುವ ಸಂಘಟನೆಯೇ ಭಾರತದಲ್ಲಿ ಆಡಳಿತ ನಡೆಸುತ್ತಿದ್ದು, ಇದರಿಂದ ಮತ್ತೊಂದು ವಿಭಜನೆಗೆ ಭಾರತೀಯ ಮುಸ್ಲಿಂ ನಾಯಕರು ಸಿದ್ಧರಾಗಿದ್ದಾರೆ ಎನ್ನುವ ಮೂಲಕ ತಮ್ಮ ರಾಜಕೀಯ ಅಪ್ರಬುದ್ಧತೆಯನ್ನು ಪ್ರದರ್ಶಿಸಿದ್ದಾರೆ.