ಕಾರವಾರ[ಆ.13]: ಅನುಪಮ ಸೌಂದರ್ಯದಿಂದ ಚಿತ್ರರಸಿಕರ ಮನಗೆದ್ದ ಅಂಕೋಲೆಯ ಕುರ್ವೆ ದ್ವೀಪ ಕೆಲ ದಿನಗಳಿಂದ ಅಬ್ಬರಿಸಿದ್ದ ಗಂಗಾವಳಿ ನದಿ ಪ್ರತಾಪಕ್ಕೆ ಸಿಲುಕಿ ಅವಶೇಷಗಳ ಗೂಡಾಗಿದೆ.

ನಮ್ಮೂರ ಮಂದಾರ ಹೂವೆ ಸೇರಿ 3 ಚಿತ್ರಗಳು ಕುರ್ವೆ ದ್ವೀಪದಲ್ಲಿ ಚಿತ್ರೀಕರಣಗೊಂಡಿದೆ. ಈ ಸಿನಿಮಾಗಳಲ್ಲಿ ನೋಡಿದ ದ್ವೀಪ ಇದೆನಾ? ಎಂದು ಗೊಂದಲಕ್ಕೆ ಬೀಳುವಷ್ಟರಮಟ್ಟಿಗೆ ಈ ಬೆಡಗಿನ ದ್ವೀಪದ ಸ್ವರೂಪ ಈಗ ಬದಲಾಗಿದೆ. ಉಟ್ಟಬಟ್ಟೆಯಲ್ಲೆ ಇರುವ ದೋಣಿ ಹತ್ತಿ ಅಂತೂ ಇಂತೂ ಇಲ್ಲಿನ ಜನ ಜೀವ ಉಳಿಸಿಕೊಂಡಿದ್ದಾರೆ. ಇದರ ಹೊರತಾಗಿ ಈಗ ಕುರ್ವೆಯಲ್ಲಿ ಏನೂ ಉಳಿದಿಲ್ಲ.

ಎರಡು ಮನೆಗಳು ಪೂರ್ತಿಯಾಗಿ ನೆಲಕಚ್ಚಿವೆ. ಬಹುತೇಕ ಮನೆಗಳು ಭಾಗಶಃ ಕುಸಿದಿವೆ. ಕಲ್ಲಿನ ಕಂಬ ಹಾಗೂ ಮಣ್ಣಿನ ಗೋಡೆ ಇರುವ ಮನೆಗಳ ಗೋಡೆಗಳೆಲ್ಲ ಕುಸಿದು ಕೇವಲ ಕಂಬದ ಮೇಲೆ ಚಾವಣಿ ಪಳೆಯುಳಿಕೆಯಂತೆ ನಿಂತುಕೊಂಡಿದೆ. ಅದೆಷ್ಟೋ ವರ್ಷಗಳಿಂದ ಕಟ್ಟಿಕೊಂಡಿದ್ದ ಬದುಕನ್ನು ಒಂದೇ ರಾತ್ರಿಯಲ್ಲಿ ಗಂಗಾವಳಿ ನದಿ ನುಚ್ಚುನೂರು ಮಾಡಿದೆ.

ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ

ಕುರ್ವೆ ಗಂಗಾವಳಿ ನದಿ ನಡುವೆ ಇದೆ. ಅಂಕೋಲಾದ ಕಣಗಿಲದಿಂದ 15 ನಿಮಿಷಗಳ ಕಾಲ ಹುಟ್ಟು ಹಾಕಿದರೆ ಕುರ್ವೆಗೆ ಹೋಗಲು ಸಾಧ್ಯ. ಸುಮಾರು 10-15 ಎಕರೆ ಪ್ರದೇಶದಲ್ಲಿದೆ. 40ರಷ್ಟುಕುಟುಂಬಗಳು, 137 ಜನರಿದ್ದಾರೆ. ಭತ್ತ ಹಾಗೂ ತೆಂಗು ಬೆಳೆಯುತ್ತಾರೆ. ಅದು ಬಿಟ್ಟರೆ ಮೀನುಗಾರಿಕೆ ಇವರ ಪ್ರಮುಖ ಕಸುಬು. ಅದೆ ಜೀವನಾಧಾರ. ಹೀಗಾಗಿ ಇವರು ಸಾಹಸಿಗಳು. ಆದ್ದರಿಂದಲೇ ಪ್ರವಾಹ ಕಾಣಿಸಿಕೊಳ್ಳುತ್ತಿದ್ದಂತೆ ತಾವೇ ಹುಟ್ಟುಹಾಕಿ ಜೀವ ಉಳಿಸಿಕೊಂಡಿದ್ದಾರೆ.

ಆದರೆ, ಕುರ್ವೆಯಲ್ಲಿ 8-10 ಅಡಿಯಷ್ಟುನೀರಿದ್ದ ಕಾರಣ ಮನೆಯಲ್ಲಿದ್ದ ಪ್ರಿಜ್‌, ಟಿವಿ, ಪಂಪ್‌ಗಳು, ವಾಷಿಂಗ್‌ ಮೆಷಿನ್‌ ಸೇರಿದಂತೆ ಎಲ್ಲ ಇಲೆಕ್ಟ್ರಿಕ್‌, ಎಲೆಕ್ಟ್ರಾನಿಕ್ಸ್‌ ಉಪಕರಣಗಳು ನಾಶವಾಗಿವೆ. ಮಳೆಗಾಲಕ್ಕೆಂದು ಸಂಗ್ರಹಿಸಿಟ್ಟಿದ್ದ ಅಕ್ಕಿ, ಧವಸ ಧಾನ್ಯಗಳು ಹಾಳಾಗಿವೆ. ಗೃಹ ಬಳಕೆ ವಸ್ತುಗಳು ಪ್ರವಾಹದಲ್ಲಿ ತೇಲಿಹೋಗಿವೆ. ಬದುಕು ಕಟ್ಟಿಕೊಳ್ಳುವುದು ಹೇಗೆಂಬ ಆತಂಕ ಎದ್ದು ಕಾಣುತ್ತಿದೆ.