ಬೆಂಗಳೂರು (ಮೇ. 07):  ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲೊಂದಾದ ಕೃಷಿ ಸಾಲ ಮನ್ನಾ ಯೋಜನೆಯಡಿ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್‌ನಲ್ಲಿ ಸಾಲ ಪಡೆದವರ ಪೈಕಿ ಈವರೆಗೆ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದ್ದು, ಒಟ್ಟು 7417 ಕೋಟಿ ರು.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

ಈವರೆಗೆ ವಾಣಿಜ್ಯ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆದ 15.5 ಲಕ್ಷ ರೈತರ ಸಾಲದ ಬಾಬ್ತು 7417 ಕೋಟಿ ರು. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದ ರೈತರ ಪೈಕಿ 7.49 ಲಕ್ಷ ರೈತರ 3929 ಕೋಟಿ ರು.ಗಳನ್ನು ಬ್ಯಾಂಕುಗಳಿಗೆ ಈವರೆಗೆ ಬಿಡುಗಡೆ ಮಾಡಲಾಗಿದೆ. ಅದೇ ರೀತಿ ಸಹಕಾರ ಬ್ಯಾಂಕ್‌ಗಳ 8.1 ಲಕ್ಷ ರೈತರ ಸಾಲದ ಮೊತ್ತ 3488 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಏಪ್ರಿಲ್‌ ತಿಂಗಳವರೆಗೆ ಬಿಡುಗಡೆಯಾಗಿರುವ ಮೊತ್ತ ಇದಾಗಿದೆ. ಹಂತ ಹಂತವಾಗಿ ರೈತರ ಸಾಲವನ್ನು ಸರ್ಕಾರವು ಬಿಡುಗಡೆ ಮಾಡುತ್ತಿದೆ. ಒಟ್ಟು 44 ಸಾವಿರ ಕೋಟಿ ರು. ನಷ್ಟುಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದೆ.

ನೀತಿ ಸಂಹಿತೆಯಿಂದಾಗಿ ಹಣ ನೀಡಿರಲಿಲ್ಲ:

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಇದ್ದ ಕಾರಣ ಮತದಾನ ಮುಗಿಯುವ ತನಕ ಸಾಲ ಮನ್ನಾ ಹಣ ಬಿಡುಗಡೆ ಮಾಡದಂತೆ ಚುನಾವಣಾ ಆಯೋಗ ತಿಳಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿರಲಿಲ್ಲ. ಎರಡು ಹಂತದ ಚುನಾವಣೆ ಮುಗಿದ ನಂತರ ರಾಜ್ಯ ಸರ್ಕಾರ ಮಾಡಿಕೊಂಡ ಮನವಿ ಮೇರೆಗೆ ಚುನಾವಣಾ ಆಯೋಗ ಸಾಲ ಮನ್ನಾ ಯೋಜನೆಯಡಿ ಹಣ ಬಿಡುಗಡೆ ಮಾಡಲು ಒಪ್ಪಿಗೆ ನೀಡಿತ್ತು.

ಈ ಮಧ್ಯೆ, ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆಯಡಿ ಹಣ ಬಿಡುಗಡೆ ಮಾಡಿಲ್ಲ ಎಂಬ ಪ್ರತಿಪಕ್ಷ ಬಿಜೆಪಿಯ ಟೀಕೆಗೆ ಉತ್ತರಿಸುವ ದಾಟಿಯಲ್ಲಿ ಸರ್ಕಾರ ಏಪ್ರಿಲ್‌ವರೆಗೆ ಸಹಕಾರ ಬ್ಯಾಂಕು ಮತ್ತು ವಾಣಿಜ್ಯ ಬ್ಯಾಂಕುಗಳಲ್ಲಿ ಎಷ್ಟುಮೊತ್ತದ ಸಾಲ ಮನ್ನಾ ಮಾಡಲಾಗಿದೆ ಎಂಬ ವಿವರವನ್ನು ಅಂಕಿ-ಅಂಶಗಳ ಸಹಿತ ಬಿಡುಗಡೆ ಮಾಡಿದೆ.