ಹೊಟ್ಟೆಗೇನ್ ತಿಂತೀರಾ? ಆರೋಪಗಳ ವಿರುದ್ಧ ಗುಡುಗಿದ ಸ್ಪೀಕರ್ ರಮೇಶ್ ಕುಮಾರ್
ವಿಧಾನಸಭಾ ಕಲಾಪದಲ್ಲಿ ಮುಂದುವರಿದ ಗದ್ದಲ; ಆಪರೇಷನ್ ಕಮಲ ಆರೋಪ- ವಾಗ್ಯುದ್ಧ; ತನ್ನ ವಿರುದ್ಧದ ಆರೋಪಗಳಿಗೆ ಸ್ಪೀಕರ್ ರಮೇಶ್ ಕುಮಾರ್ ಗರಂ
ಬೆಂಗಳೂರು (ಜು.19): ವಿಶ್ವಾಸ ಮತ ಯಾಚನೆ ಕಲಾಪದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತು ಮುಗಿಸುತ್ತಿದ್ದಂತೆ, ಆಪರೇಷನ್ ಕಮಲ ಭಾರೀ ಸದ್ದು ಮಾಡಿದೆ.
ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡುತ್ತಿದೆ ಎಂಬ ಆಡಳಿತ ಪಕ್ಷದ ಶಾಸಕರ ಆರೋಪವು, ಬಿಜೆಪಿ ನಾಯಕರನ್ನು ಕೆರಳಿಸಿತು. ಇದು ಆಡಳಿತ ಪಕ್ಷ ಮತ್ತು ವಿಪಕ್ಷ ಶಾಸಕರ ನಡುವೆ ವಾಗ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್, ಇಂದಿನ ರಾಜಕೀಯದ ಬಗ್ಗೆ ಬೇಸರ, ಆಕ್ರೋಶ ಹೊರಹಾಕಿದರು. ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಗುಡುಗಿದರು.
ಇದನ್ನೂ ಓದಿ | ಸದನದಲ್ಲಿ ಸಿಎಂ ಭಾಷಣ: ವಿದಾಯವೋ? ವಿಶ್ವಾಸವೋ?
‘ನಾನು ಪ್ರತಿಕ್ಷಣವೂ ಬೆಂಕಿ ಮೇಲೆ ಕೂತಿದ್ದೇನೆ, ಜವಾಬ್ದಾರಿ ಸ್ಥಾನದಲ್ಲಿರುವವರೇ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾಡ್ತಾರೆ. ಇವರು ಹೊಟ್ಟೆಗೆ ಏನು ತಿಂತಾರೆ?, ನಾನು ವಾಸವಿರುವ ಮನೆಗೆ ಬಂದು ನೋಡಿ. ಸೆಕ್ಯೂರಿಟಿ ಹಾಕಿಸಿಕೊಳ್ಳಲ್ಲ, ಸರ್ಕಾರಿ ಬೋರ್ಡ್ ಹಾಕಿಲ್ಲ, ಕಾರಿನ ಮೇಲೆ ಗೂಟ ಹಾಕಿಸಿಲ್ಲ, ನಿಮ್ಮ ಹೊಲಸಿಗೆ, ವ್ಯಾಪಾರಕ್ಕೆ, ಸ್ವಾರ್ಥಕ್ಕೆ, ದರಿದ್ರತನಕ್ಕೆ, ಗೌರವದಿಂದ ಬದುಕುವವರನ್ನು ಸಾಯಿಸಕ್ಕೆ ಹೋಗ್ತೀರಲ್ಲಾ? ಪ್ರಾಮಾಣಿಕರಾಗಿರುವವರು ಎಲ್ಲಿ ಹೋಗಿ ಸಾಯ್ಬೇಕು? ಏನೆಲ್ಲಾ ಇದೆಯೋ, ಅದೆಲ್ಲಾ ಹೊರಬರಲಿ, ನಾನು ಯಾವುದನ್ನೂ ತಡೆಯಲ್ಲ, ಎಲ್ಲಾ ಕೊಳಕು ಹೊರ ಬರಲಿ, ಎಂದು ಗುಡುಗಿದರು.
ಶಾಸಕರಿಗೆ ಆಮಿಷವೊಡ್ಡುವ ವಿಚಾರವಾಗಿ ಕೇಸು ದಾಖಲಾಗಬೇಕು, ಎಂದು ಆಕ್ರೋಶ ಹೊರಹಾಕಿದರು.