ಬೆಂಗಳೂರು[ಜು.24]: ಮಂಗಳವಾರದಂದು ವಿಧಾನಸಭೆಯಲ್ಲಿ ಎಚ್. ಡಿ. ಕುಮಾರಸ್ವಾಮಿ ವಿಶ್ವಾಸಮತ ಪಡೆಯುವಲ್ಲಿ ವಿಫಲವಾಗಿದ್ದು, ಮೈತ್ರಿ ಸರ್ಕಾರ ಆಯಸ್ಸು 14 ತಿಂಗಳಿಗೇ ಮುಕ್ತಾಯಗೊಂಡಿದೆ. ಕುಮಾರಸ್ವಾಮಿ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಒಂದೆಡೆ ಬಿಜೆಪಿ ನಾಯಕರು ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಿರುವಾಗಲೇ ಮೈತ್ರಿ ಸರ್ಕಾರದ ವಿಚಾರದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಪಕ್ಷಪಾತಿಯಂತೆ ವರ್ತಿಸಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಸ್ಪೀಕರ್ ರಮೇಶ್ ಕುಮಾರ್ ನಡೆಯಿಂದ ಅಸಮಾಧಾನ ವ್ಯಕ್ತಪಡಿಸಿರುವ ಹೊನ್ನಳ್ಳಿ ಬಿಜೆಪಿ ಶಾಸಕ ಎಂ. ಪಿ ರೇಣಿಕಾಚಾರ್ಯ 'ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಪಕ್ಷಪಾತಿಯಂತೆ ವರ್ತಿಸಿದ್ದಾರೆ. ಅವರನ್ನು ನಾವೆಲ್ಲ ಅವಿರೋಧ ಆಯ್ಕೆ ಮಾಡಿದ್ದೆವು. ಆದರೆ ಅವರು ಅತೃಪ್ತ ಶಾಸಕರು ರಾಜೀನಾಮೆ ನೀಡಿದಾಗ ತಕ್ಷಣ ಅಂಗೀಕರಿಸದೆ ವಿಳಂಬ ಮಾಡುತ್ತಿದ್ದಾರೆ. ಈ ಮೂಲಕ ಅವರನ್ನು ಅನರ್ಹಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸುತ್ತೇವೆ' ಎಂದಿದ್ದಾರೆ.

ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?

ಇದೇ ಸಂದರ್ಭದಲ್ಲಿ ಮುಂದಿನ ಸಭಾಧ್ಯಕ್ಷರು ಹಾಗಾದ್ರೆ ಯಾರು? ಎಂಬ ಪ್ರಶ್ನೆಗೂ ಉತ್ತರಿಸಿರುವ ರೇಣುಕಾಚಾರ್ಯ 'ಮುಂದೆ ಸಭಾಧ್ಯಕ್ಷರು ಯಾರಾಗಬೇಕು ಎಂದು ನಮ್ಮ‌ ಪಕ್ಷದ ವರಿಷ್ಟರು ತೀರ್ಮಾನ ಕೈಗೊಳ್ಳುತ್ತಾರೆ' ಎಂದಿದ್ದಾರೆ.

ಕಾಂಗ್ರೆಸ್ ಶಾಸಕರ ಆನಂದ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾವೇ ನಡೆದಿತ್ತು. ಮೈತ್ರಿ ಪಾಳಯದ ಶಾಸಕರೆಲ್ಲಾ ಒಬ್ಬರಾದ ಬಳಿಕ ಮತ್ತೊಬ್ಬರಂತೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು. ಇದರಿಂದ 16 ತಿಂಗಳ ಹಿಂದೆ ಅಧಿಕಾರಕ್ಕೇರಿದ್ದ ದೋಸ್ತಿ ಸರ್ಕಾರದಲ್ಲಿ ಆತಂಕದ ಛಾಯೆ ನಿರ್ಮಾಣವಾಗಿತ್ತು. ಸಿದ್ದರಾಮಯ್ಯ, ಜಿಟಿಡಿ, ಡಿ. ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಅತೃಪ್ತರ ಮನವೊಲಿಸಲು ಯತ್ನಿಸಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೂ ಅತೃಪ್ತರ ಹಠವೇ ಗೆದ್ದಿತು ಹಾಗೂ ದೋಸ್ತಿ ಸರ್ಕಾರ ಪತನಗೊಂಡಿದೆ.

ಈ ರಾಜಕೀಯ ಪ್ರಹಸನದಲ್ಲಿ ಸ್ಪೀಕರ್ ರಮೆಶ್ ಕುಮಾರ್ ನಡೆ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಮೊದಲು ಅತೃಪ್ತರ ರಾಜೀನಾಮೆ ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲೂ ವಿಳಂಬ ಮಾಡುತ್ತಿದ್ದಾರೆಂಬ ಮಾತುಗಳು ಸದ್ದು ಮಾಡಿದ್ದವು. ಸ್ಪೀಕರ್ ಈ ನಡೆ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿತ್ತು.