ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ನ್ಯಾಯಾಧೀಕರಣ 2ರ ತೀರ್ಪಿನ ಅನ್ವಯ 130 ಟಿ.ಎಂ.ಸಿ. ಹೆಚ್ಚುವರಿಯಾಗಿ ಹಂಚಿಕೆ ಆಗಿದೆ. ಇದರಲ್ಲಿ 9 ಉಪ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್​ನಿಂದ 524.25 ಮೀಟರ್​ಗೆ ಎತ್ತರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ.  130 ಟಿ.ಎಂ.ಸಿ.ನೀರಿನಿಂದ 5,30,475 ಹೆಕ್ಟೇರ್​ ಭೂಮಿ ನೀರಾವರಿ ಆಗುತ್ತಿತ್ತು. ಈ 9 ಉಪ ಯೋಜನೆಗಳಿಗೆ ಆರಂಭದಿಂದ ಇಲ್ಲಿಯವರೆಗೆ 4,989 ಕೋಟಿ ರೂ.ಖರ್ಚು ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಬೆಂಗಳೂರು(ಮಾ.08): ಇಡೀ ರಾಜ್ಯ ಜಲಕ್ಷಾಮದಿಂದ ಬಳಲುತ್ತಿದ್ದರೆ ಅತ್ತ ಆಲಮಟ್ಟಿ ಜಲಾಶಯದಿಂದ ಹೆಚ್ಚುವರಿ ನೀರು ನೆರೆಯ ಆಂಧ್ರಕ್ಕೆ ಹರಿದು ಹೋಗುತ್ತಿರುವುದು ಬೆಳಕಿಗೆ ಬಂದಿದೆ.

2016ರ ಡಿಸೆಂಬರ್ ಅಂತ್ಯಕ್ಕೆ ಆಂಧ್ರ ಪ್ರದೇಶಕ್ಕೆ ಹೆಚ್ಚುವರಿಯಾಗಿ 240 ಟಿ.ಎಂ.ಸಿ. ನೀರು ಹರಿದು ಹೋಗಿದೆ ಎಂದು ಆಲಮಟ್ಟಿಯ ಜಲಾಶಯದ ಮುಖ್ಯ ಇಂಜಿನಿಯರ್​ ವಿಧಾನಸಭೆಯ ಅಂದಾಜು ಸಮಿತಿ ನಡೆಸಿದ ಸಭೆಯಲ್ಲಿ ವಿವರ ನೀಡಿದ್ದಾರೆ. ಅದೇ ರೀತಿ 3,000 ಕಿ.ಮೀ.ವಿಸ್ತಿರ್ಣದ ವಿತರಣಾ ಕಾಲುವೆ ಪೈಕಿ ಕೇವಲ 700 ಕಿ.ಮೀ.ನಷ್ಟು ಮಾತ್ರ ವಿತರಣಾ ಕಾಲುವೆ ನಿರ್ಮಾಣ ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದ್ದಾರೆ.

ಶಾಸಕ ಮಾಲೀಕಯ್ಯ ಗುತ್ತೇದಾರ್​ ಅಧ್ಯಕ್ಷತೆಯಲ್ಲಿರುವ ವಿಧಾನಸಭೆಯ ಅಂದಾಜು 2016ರ ಡಿಸೆಂಬರ್​ 30ರಂದು ನಡೆಸಿದ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿ ಕುರಿತು ಚರ್ಚಿಸಲಾಗಿದೆ. 3-4 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ಎತ್ತಿನ ಹೊಳೆ ಯೋಜನೆ ಅನುಷ್ಠಾನಗೊಂಡಲ್ಲಿ ಅದರಿಂದ 4ರಿಂದ 21 ಟಿಎಂಸಿ ನೀರು ಹರಿಸಬಹುದು ಎಂದು ಅಧಿಕಾರಿಗಳು ಲೆಕ್ಕಾಚಾರ ಮಾಡುತ್ತಿದ್ದರೆ, ಇತ್ತ ಆಲಮಟ್ಟಿ ಜಲಾಶಯದಿಂದ ಪ್ರತಿ ವರ್ಷ ನೂರಾರು ಟಿ.ಎಂ.ಸಿ.ನೀರು ನೆರೆಯ ಆಂಧ್ರ ಪ್ರದೇಶಕ್ಕೆ ಹರಿದು ಹೋಗುತ್ತಿದೆ. 1 ಟಿಎಂಸಿ ನೀರಿನಿಂದ ಅಂದಾಜು 4,500 ಎಕರೆ ಭತ್ತ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದು ಎಂದು ನೀರಾವರಿ ಪರಿಣಿತರು ಹೇಳುತ್ತಾರೆ.

ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದಲ್ಲಿ ನ್ಯಾಯಾಧೀಕರಣ 2ರ ತೀರ್ಪಿನ ಅನ್ವಯ 130 ಟಿ.ಎಂ.ಸಿ. ಹೆಚ್ಚುವರಿಯಾಗಿ ಹಂಚಿಕೆ ಆಗಿದೆ. ಇದರಲ್ಲಿ 9 ಉಪ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆಲಮಟ್ಟಿ ಜಲಾಶಯದ ಎತ್ತರವನ್ನು 519.60 ಮೀಟರ್​ನಿಂದ 524.25 ಮೀಟರ್​ಗೆ ಎತ್ತರಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿಲ್ಲ. 130 ಟಿ.ಎಂ.ಸಿ.ನೀರಿನಿಂದ 5,30,475 ಹೆಕ್ಟೇರ್​ ಭೂಮಿ ನೀರಾವರಿ ಆಗುತ್ತಿತ್ತು. ಈ 9 ಉಪ ಯೋಜನೆಗಳಿಗೆ ಆರಂಭದಿಂದ ಇಲ್ಲಿಯವರೆಗೆ 4,989 ಕೋಟಿ ರೂ.ಖರ್ಚು ಮಾಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.

ಖರ್ಚಾಗಿದೆ 120 ಕೋಟಿ

ಕೃಷ್ಣಾ ಮೇಲ್ದಂಡೆ ಯೋಜನೆ ವ್ಯಾಪ್ತಿಯಲ್ಲಿ'ನ ಸಣ್ಣ ನೀರಾವರಿ ಯೋಜನೆಗಳ ಅನುಷ್ಠಾನ ಹಂತದಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಕಾಲುವೆ ನಿರ್ಮಾಣ ಮಾಡುವಾಗ ಅಧಿಕಾರಿಗಳು ಗ್ರಾವಿಟಿ ಮೇಲೆ ತುಂಬುವ ಕೆರೆಗೆ ಏತ ನೀರಾವರಿ ಯೋಜನೆ ರೂಪಿಸಿದ್ದಾರೆ. ಇದಕ್ಕೆ 120 ಕೋಟಿ ರೂಪಾಯಿ ಖರ್ಚಾಗಿದೆ. ಬೃಹತ್​ ನೀರಾವರಿಯಿಂದ ಮೇಜರ್​ ಗ್ರಾವಿಟಿ ಮೇಲೆ ಕೆನಾಲ್​ನಿಂದ ಕೆರೆಗೆ ನೀರು ಹೋಗಲಿದೆ ಎನ್ನುವ ಪ್ರಾಥಮಿಕ ಮಾಹಿತಿಯೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಇಲ್ಲ. ಕಾಲುವೆಯಿಂದ ನೀರು ಬಿಟ್ಟರೆ ನೇರವಾಗಿ ಕೆರೆಗೆ ಹರಿದು ಹೋಗಲಿದ್ದರೂ ಪ್ರತ್ಯೇಕವಾಗಿ ಏತ ನೀರಾವರಿ ಯೋಜನೆ ರೂಪಿಸಿರುವ ಅಧಿಕಾರಿಗಳ ನಡೆ ಕುರಿತು ಸಂಶಯಗಳಿಗೆ ಕಾರಣವಾಗಿದೆ.

ವರದಿ: ಜಿ.ಮಹಾಂತೇಶ್,ಸುವರ್ಣ ನ್ಯೂಸ್