ಬೆಂಗಳೂರು (ಜು.19): ವಿಶ್ವಾಸಮತ ಯಾಚನೆ ಕಲಾಪ ಶುಕ್ರವಾರವೂ ಮುಂದುವರಿದಿದೆ. ಒಂದು ಕಡೆ ಮೈತ್ರಿಕೂಟವು ವಿಶ್ವಾಸಮತದ ಕುರಿತಂತೆ ಚರ್ಚೆ ನಡೆಸುತ್ತಿದೆ. ಕಾಂಗ್ರೆಸ್-ಜೆಡಿಎಸ್ ಸೇರಿ ಉದ್ದೇಶಪೂರ್ವಕವಾಗಿ ವಿಶ್ವಾಸ ಮತಯಾಚನೆಯನ್ನು ವಿಳಂಬ ಮಾಡುತ್ತಿದೆ ಎಂದು ಬಿಜೆಪಿಯು ಆರೋಪಿಸಿದೆ.  

ಇನ್ನೊಂದು ಕಡೆ, ರಾಜ್ಯಪಾಲರು ವಿಧಿಸಿದ್ದ ಗಡುವು ಕೂಡಾ ಮುಗಿದಿದ್ದು, ಸ್ಪೀಕರ್ ನಡೆ ಬಿಜೆಪಿ ನಾಯಕರನ್ನು ಕೆರಳಿಸಿದೆ. ತಕ್ಷಣ ವಿಶ್ವಾಸ ಮತ ನಡೆಯಬೇಕೆಂದು ಬಿಜೆಪಿ ಒತ್ತಡ ಹೇರುತ್ತಿದೆ.   ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ವಿಶ್ವಾಸ ಮತ ಕಲಾಪ ಇನ್ನೂ ನಡೆಯುತ್ತಿದೆ. ಅಭಿಪ್ರಾಯ ಮಂಡಿಸಲು 20 ಶಾಸಕರು ಹೆಸರು ನೀಡಿದ್ದಾರೆ. ಅದರ ನಂತರ ವಿಶ್ವಾಸ ಮತ ಯಾಚಿಸಬಹುದಾಗಿದೆ. ಇದನ್ನು ಒಂದು ವ್ಯಾಪಾರವಾಗಿ ಪರಿಗಣಿಸಿರುವ ಬಿಜೆಪಿಯು ಬಹಳ ಒತ್ತಡದಲ್ಲಿದೆ. ಈಗಾಗಲೇ ಕೆಲವರಿಗೆ ಪೇಮೆಂಟ್ ಮಾಡಿರುವುದರಿಂದ ಆದಷ್ಟು ಬೇಗ ಅಧಿಕಾರ ಹಿಡಿಯುವ ಧಾವಂತದಲ್ಲಿದ್ದಾರೆ, ಎಂದು ಸಿದ್ದರಾಮಯ್ಯ ಕೆಣಕಿದ್ದಾರೆ.