ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟು ಬಹುತೇಕ ಇತ್ಯರ್ಥವಾಗಿದ್ದರೂ ಕಾಂಗ್ರೆಸ್‌ ಪಾಲಿನಲ್ಲಿ ಯಾವ ಮಂತ್ರಿ ಪದವಿಯನ್ನು ಯಾರಿಗೆ ನೀಡಬೇಕು ಹಾಗೂ ಎಷ್ಟುಹಂತದಲ್ಲಿ ಸಂಪುಟ ವಿಸ್ತರಿಸಬೇಕು ಎಂಬ ವಿಷಯವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. 

ಬೆಂಗಳೂರು : ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಬಿಕ್ಕಟ್ಟು ಬಹುತೇಕ ಇತ್ಯರ್ಥವಾಗಿದ್ದರೂ ಕಾಂಗ್ರೆಸ್‌ ಪಾಲಿನಲ್ಲಿ ಯಾವ ಮಂತ್ರಿ ಪದವಿಯನ್ನು ಯಾರಿಗೆ ನೀಡಬೇಕು ಹಾಗೂ ಎಷ್ಟುಹಂತದಲ್ಲಿ ಸಂಪುಟ ವಿಸ್ತರಿಸಬೇಕು ಎಂಬ ವಿಷಯವಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಮಧ್ಯಪ್ರವೇಶ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೀಗಾಗಿ ಸಂಪುಟ ವಿಸ್ತರಣೆ ಗುರುವಾರ ನಡೆಯುತ್ತದೋ ಅಥವಾ ಇನ್ನೂ ನಾಲ್ಕೈದು ದಿನಗಳ ಕಾಲ ವಿಳಂಬವಾಗುತ್ತದೋ ಎಂಬುದಷ್ಟೇ ಈಗ ಉಳಿದಿರುವ ಕುತೂಹತ ಎಂದು ಉನ್ನತ ಮೂಲಗಳು ತಿಳಿಸಿವೆ.

ಸೋಮವಾರ ದೆಹಲಿಗೆ ತೆರಳಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ಸಿನ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರೊಂದಿಗೆ ಮಾತುಕತೆ ನಡೆಸಿ ವಾಪಸಾಗಿದ್ದರು. ಭಾನುವಾರ ವಿದೇಶಕ್ಕೆ ತೆರಳುವ ಮೊದಲು ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟು ಬಗೆಹರಿಸುವ ಹೊಣೆಯನ್ನು ರಾಹುಲ್‌ ಗಾಂಧಿ ಅವರು ಆಜಾದ್‌ ಅವರಿಗೆ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಆಜಾದ್‌ ಅವರು ರಾಜ್ಯ ಕಾಂಗ್ರೆಸ್‌ ನಾಯಕರು ಹಾಗೂ ಕುಮಾರಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದರು.

ಆದರೆ, ಯಾವ ಖಾತೆ ಯಾರಿಗೆ ಎಂಬ ವಿಷಯವಾಗಿ ಗುಲಾಂ ನಬಿ ಆಜಾದ್‌ ಅವರು ಮಾತುಕತೆ ನಡೆಸಿದರೂ ಕೆಲವು ಖಾತೆಗಳಿಗಾಗಿ ಬಿಗಿಪಟ್ಟು ಮುಂದುವರೆಸಿದ್ದರಿಂದ ಅವರೂ ರಾಹುಲ್‌ ಅಪ್ಪಣೆಗಾಗಿ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

ಇದೀಗ ಅಂತಿಮವಾಗಿ ರಾಹುಲ್‌ ಗಾಂಧಿ ಅವರೇ ಮಧ್ಯಪ್ರವೇಶಿಸಿಸಬೇಕಾಗಿದೆ. ಈ ಮಾತುಕತೆ ನೇರವಾಗಿ ಆಗಬಹುದು ಅಥವಾ ದೂರವಾಣಿ ಮೂಲಕವೂ ಆಗಬಹುದು. ಆದರೆ, ರಾಹುಲ್‌ ಸಮ್ಮುಖದಲ್ಲಿ ಇತ್ಯರ್ಥವಾದಲ್ಲಿ ಮಾತ್ರ ಬಿಕ್ಕಟ್ಟಿಗೆ ಪರಿಹಾರ ಸಿಗಬಹುದು ಎಂಬ ಅಭಿಪ್ರಾಯ ಜೆಡಿಎಸ್‌ ಪಾಳೆಯದಿಂದಲೂ ಹೊರಬಿದ್ದಿದೆ.