ಬೆಂಗಳೂರು[ಜು.12]: ವಿಧಾನಮಂಡಲದ ಅಧಿವೇಶನಕ್ಕೆ ಕಡ್ಡಾಯವಾಗಿ ಹಾಜರಾಗಲು ಸೂಚಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಶಾಸಕರಿಗೆ ನೀಡಿರುವ ವಿಪ್‌ ರಾಜೀನಾಮೆ ನೀಡಿರುವ ಶಾಸಕರಿಗೆ ಅನ್ವಯವಾಗುವ ಬಗ್ಗೆ ಜಿಜ್ಞಾಸೆ ಉಂಟಾಗಿದೆ.

ಕೆಲ ಕಾನೂನು ತಜ್ಞರ ಪ್ರಕಾರ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರಿಗೆ ಅಧಿವೇಶನಕ್ಕೆ ಹಾಜರಾಗುವಂತೆ ವಿಪ್‌ ನೀಡಲು ಬರುವುದಿಲ್ಲ. ವಿಪ್‌ ನೀಡಿದ್ದರೂ ಅದು ಅನ್ವಯವಾಗುವುದಿಲ್ಲ. ಆದರೆ, ಮತ್ತೆ ಕೆಲ ತಜ್ಞರ ಪ್ರಕಾರ ಶಾಸಕರು ರಾಜೀನಾಮೆ ನೀಡಿದ್ದರೂ ರಾಜೀನಾಮೆಯನ್ನು ವಿಧಾನಸಭೆ ಸಭಾಧ್ಯಕ್ಷರು ಅಂಗೀಕರಿಸಿಲ್ಲ. ಹೀಗಾಗಿ ಅವರು ಹಾಲಿ ಶಾಸಕರಾಗಿಯೇ ಪರಿಗಣಿಸಲ್ಪಡುತ್ತಾರೆ. ಶಾಸಕರಿಗೆ ನೀಡುವ ಯಾವುದೇ ವಿಪ್‌ ರಾಜೀನಾಮೆ ನೀಡಿರುವವರಿಗೂ ಅನ್ವಯವಾಗುತ್ತದೆ ಎನ್ನುತ್ತಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹಿರಿಯ ವಕೀಲರ ಕೆ.ವಿ. ಧನಂಜಯ ಅವರು, ಶಾಸಕರ ರಾಜೀನಾಮೆಯು ಅಂಗೀಕಾರ ದಿನದಿಂದ ಅನ್ವಯವಾಗದೇ, ರಾಜೀನಾಮೆ ಪತ್ರ ಸಲ್ಲಿಕೆ ದಿನದಿಂದಲೇ ಜಾರಿಗೆ ಬರುತ್ತದೆ. ಹೀಗಾಗಿ ಪಕ್ಷವೊಂದು ವಿಪ್‌ ಜಾರಿ ಮಾಡಿದ ನಂತರ ರಾಜೀನಾಮೆ ನೀಡಿದ್ದರೆ ಆಗ ವಿಪ್‌ ಅನ್ವಯವಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ರಾಜೀನಾಮೆ ನೀಡಿದ ನಂತರ ವಿಪ್‌ ಜಾರಿಯಾಗಿದೆ. ಹೀಗಾಗಿ ಅತೃಪ್ತ ಶಾಸಕರಿಗೆ ವಿಪ್‌ ಜಾರಿ ಅನ್ವಯವಾಗುವುದಿಲ್ಲ ಎಂದು ಹೇಳುತ್ತಾರೆ.

ಪ್ರಸ್ತುತ ಅತೃಪ್ತ ಶಾಸಕರು ಸಲ್ಲಿಸಿರುವ ರಾಜೀನಾಮೆಯನ್ನು ಅಂಗೀಕರಿಸದಿರುವುದು ಸ್ಪೀಕರ್‌ ಅವರ ಎಸಗಿದ ಲೋಪ. ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ. ಹೀಗಾಗಿ, ತಮಗೆ ವಿಪ್‌ ಅನ್ವಯವಾಗುವುದಿಲ್ಲ ಎಂದು ರಾಜೀನಾಮೆ ನೀಡಿರುವ ಶಾಸಕರು ವಿಪ್‌ ಜಾರಿ ಮಾಡಿದ ಮುಖ್ಯ ಸಚೇತಕರಿಗೆ ಪತ್ರ ಬರೆದುಕೊಡಬಹುದು ಎಂದು ವಿವರಿಸುತ್ತಾರೆ.

ಈ ಬಗ್ಗೆ ಕನ್ನಡಪ್ರಭದೊಂದಿಗೆ ಮಾತನಾಡಿದ ಮಾಜಿ ಸಂಸದ ಹಾಗೂ ವಕೀಲ ವಿ.ಎಸ್‌. ಉಗ್ರಪ್ಪ, ರಾಜೀನಾಮೆ ನೀಡಿರುವ ಶಾಸಕರು ಇಂದಿಗೂ ವಿಧಾನಸಭೆ ಸದಸ್ಯರು. ಹೀಗಾಗಿ ಅವರಿಗೆ ವಿಪ್‌ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.