ಬೆಂಗಳೂರು[ಜು.16]: ಕಳೆದ ಮೂರು ದಿನಗಳಿಂದ ಮಹಾರಾಷ್ಟ್ರದ ವಿವಿಧ ದೇವಾಲಯಗಳಿಗೆ ತೆರಳಿ ದರ್ಶನ ಪಡೆದ ಮುಂಬೈನಲ್ಲಿರುವ ಅತೃಪ್ತ ಶಾಸಕರು ಸೋಮವಾರ ಹೋಟೆಲ್‌ನಲ್ಲೇ ಉಳಿದು ರಾಜ್ಯದ ವಿಧಾನಮಂಡಲ ಅಧಿವೇಶನ ಹಾಗೂ ಬೆಂಗಳೂರಿನ ಇತರೆ ರಾಜಕೀಯ ಬೆಳವಣಿಗೆಗಳ ಮೇಲೆ ನಿಗಾ ವಹಿಸಿದ್ದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ವಿಶ್ವಾಸಮತ ಸಾಬೀತುಪಡಿಸುವುದಕ್ಕೆ ಸಮಯ ನಿಗದಿಯಾಗಿರುವ ಗುರುವಾರ ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧಾರವಾಗಲಿದೆ. ಹಾಗಾಗಿ ಗುರುವಾರದವರೆಗೂ ಎಲ್ಲ ಅತೃಪ್ತರೂ ಮುಂಬೈನಲ್ಲೇ ಉಳಿಯಲು ನಿರ್ಧರಿಸಿದ್ದಾರೆ. ಅಲ್ಲದೆ, ತಮ್ಮ ರಾಜೀನಾಮೆ ವಿಳಂಬ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮಂಗಳವಾರ ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತೀರ್ಪು ಏನು ಬರಲಿದೆಯೋ ಎಂಬ ಆತಂಕದಲ್ಲಿ ಅತೃಪ್ತರಿದ್ದಾರೆ ಎನ್ನಲಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾನುವಾರ ಮುಂಬೈ ಸೇರಿದ ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್‌, ಕಳೆದ 9 ದಿನಗಳಿಂದ ಹೋಟೆಲ್‌ನಲ್ಲಿ ಠಿಕಾಣಿ ಹೂಡಿರುವ ರಮೇಶ್‌ ಜಾರಕಿಹೊಳಿ, ಬೈರತಿ ಬಸವರಾಜು, ಎಸ್‌.ಟಿ.ಸೋಮಶೇಖರ್‌, ಮಹೇಶ್‌ ಕುಮಟಳ್ಳಿ, ಕೆ.ಗೋಪಾಲಯ್ಯ, ಎಚ್‌.ವಿಶ್ವನಾಥ್‌, ನಾರಾಯಣಗೌಡ, ಆರ್‌.ಶಂಕರ್‌, ನಾಗೇಶ್‌ ಸೇರಿದಂತೆ ಎಲ್ಲಾ 14 ಜನ ಅತೃಪ್ತರು ಸೋಮವಾರ ಇಡೀ ದಿನ ಹೋಟೆಲ್‌ನಲ್ಲೇ ಕಾಲ ಕಳೆದರು. ಜು.6ರಂದು ಬೆಂಗಳೂರು ಬಿಟ್ಟು ಮುಂಬೈ ಸೇರಿಕೊಂಡಿದ್ದ ಅತೃಪ್ತರ ಮಾಯಾನಗರಿ ವಾಸ್ತವ್ಯ ಹತ್ತನೇ ದಿನಕ್ಕೆ ಬಂದು ತಲುಪಿದೆ. ಗುರುವಾರದವರೆಗೂ ಬೆಂಗಳೂರಿಗೆ ಬರಬಾರದು. ಮೈತ್ರಿ ಸರ್ಕಾರ ಪತನದ ಬಳಿವಷ್ಟೇ ಬೆಂಗಳೂರಿಗೆ ಬರಬೇಕು ಎಂದು ಅತೃಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮತ್ತೆ ಪೊಲೀಸರಿಗೆ ಮೊರೆ

ರಾಜ್ಯದ ಘಟಾನುಘಟಿ ಕಾಂಗ್ರೆಸ್‌ ನಾಯಕರು ತಮ್ಮ ಮನವೊಲಿಕೆಗೆ ಮುಂಬೈಗೆ ಬರಲು ಸಿದ್ಧರಾಗುತ್ತಿದ್ದಾರಂತೆ ಎಂಬ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಅತೃಪ್ತರು ಮತ್ತೆ ಮುಂಬೈ ಪೊಲೀಸರ ಮೊರೆ ಹೋದ ಘಟನೆಯೂ ನಡೆಯಿತು.

ಪಕ್ಷದ ನಾಯಕರು ಸೋಮವಾರ ಬೆಳಗಿನ ಜಾವ ಮುಂಬೈಗೆ ತಲುಪುವ ಸಾಧ್ಯತೆ ಇದೆ ಎನ್ನಲಾದ ಸುದ್ದಿ ಹಿನ್ನೆಲೆಯಲ್ಲಿ ತಡರಾತ್ರಿ 2 ಗಂಟೆ ಸುಮಾರಿಗೆ ಮುಂಬೈ ನಗರ ಪೊಲೀಸ್‌ ಆಯುಕ್ತರಿಗೆ ಅತೃಪ್ತರು ಮತ್ತೊಂದು ಮನವಿ ಪತ್ರ ನೀಡಿ, ನಮಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಇಚ್ಛೆ ಇಲ್ಲ. ನಮ್ಮ ಭೇಟಿಗೆ ಕೆಲ ಕಾಂಗ್ರೆಸ್‌ ನಾಯಕರು ಬರುತ್ತಿದ್ದಾರೆಂಬ ಸುದ್ದಿ ಇದ್ದು, ಯಾರೇ ಬಂದರೂ ಭೇಟಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು ಎಂದು ತಿಳಿದು ಬಂದಿದೆ.

ಆದರೆ, ಬೆಳಗ್ಗೆಯಾದರೂ ಯಾವುದೇ ನಾಯಕರು ಮುಂಬೈಗೆ ಬರದೆ, ಬೆಂಗಳೂರಿನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಮತ್ತಿತರ ಸಭೆಗಳಲ್ಲಿ ಭಾಗಿಯಾಗಿರುವುದನ್ನು ನೋಡಿ ನಿರಾಳರಾದರು. ಈ ಮಧ್ಯೆ, ಕೆಲ ಮಹಾರಾಷ್ಟ್ರ ಬಿಜೆಪಿ ನಾಯಕರು ಅತೃಪ್ತರಿರುವ ಹೋಟೆಲ್‌ಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿ ಮರಳಿದರು ಎಂದು ಮೂಲಗಳು ತಿಳಿಸಿವೆ.