ಬೆಂಗಳೂರು [ಜು.19] :  ವಿಧಾನಸಭಾ ಅಧಿವೇಶನದ ಹಿನ್ನೆಲೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನಚ್ಚರಿಕೆ ವಹಿಸಿದ್ದ ಪೊಲೀಸರು, ಗುರುವಾರ ವಿಧಾನಸೌಧ ಸುತ್ತಮುತ್ತ ಬಿಗಿ ಬಂದೋಬಸ್‌್ತ ಕಲ್ಪಿಸಿದ್ದರು. ಇದೇ ರಕ್ಷಣಾ ವ್ಯವಸ್ಥೆ ಶುಕ್ರವಾರ ಸಹ ಮುಂದುವರೆಯಲಿದೆ.

ಅಧಿವೇಶನ ನಿಮಿತ್ತವಾಗಿ ಸೋಮವಾರದಿಂದಲೇ ಅಧಿಕಾರದ ಶಕ್ತಿ ಸೌಧದ ಎರಡು ಕಿ.ಮೀ ವ್ಯಾಪ್ತಿ ನಿಷೇಧಾಜ್ಞೆ ಜಾರಿಗೊಳಿಸಿದ್ದ ಆಯುಕ್ತರು, ಭದ್ರತೆಗೆ ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ಉಮೇಶ್‌ ಕುಮಾರ್‌ ನೇತೃತ್ವದಲ್ಲಿ ಒಂದು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಿದ್ದರು.

ವಿಧಾನಸೌಧ ಪ್ರವೇಶಿಸುವ ಪ್ರತಿ ದ್ವಾರದ ಬಂದೋಬಸ್ತ್ ಹೊಣೆಗಾರಿಕೆಯನ್ನು ಡಿಸಿಪಿಗಳಿಗೆ ವಹಿಸಲಾಗಿತ್ತು. ಈ ಭದ್ರತೆಯಲ್ಲಿ ಐವರು ಡಿಸಿಪಿ ಹಾಗೂ 20 ಎಸಿಪಿಗಳು ಸೇರಿದಂತೆ 500ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಹಾಗೆ 25 ಕೆಎಸ್‌ಆರ್‌ಪಿ ತುಕಡಿ ಹಾಗೂ 21 ಸಿಆರ್‌ ತುಕಡಿಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿಷೇಧಾಜ್ಞೆ ಜಾರಿ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಐವರಿಗಿಂತ ಹೆಚ್ಚಿನ ಜನರು ಗುಂಪುಗೂಡುವುದು, ಸಂಭ್ರಮಾಚರಣೆ, ಪ್ರತಿಭಟನೆ ಹಾಗೂ ಧರಣಿಗಳನ್ನು ಸಹ ಪೊಲೀಸರು ನಿರ್ಬಂಧಿಸಿದ್ದರು. ಇನ್ನು ವಿಧಾನಸೌಧ ಪ್ರವೇಶಿಸುವ ಪ್ರತಿಯೊಬ್ಬರನ್ನು ಭದ್ರತಾ ಸಿಬ್ಬಂದಿ ತೀವ್ರ ತಪಾಸಣೆಗೊಳಪಡಿಸಿ ಬಿಡುತ್ತಿದ್ದರು.