ಬೆಂಗಳೂರು [ಜು.12] :  ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು 50 ಕೋಟಿ ರು. ಲಂಚ ಪಡೆದು ವಿವಿಧ ಇಲಾಖೆಯಲ್ಲಿ ಎಂಜಿಯರ್‌ಗಳಿಗೆ ಬಡ್ತಿ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾದ ಉಪಾಧ್ಯಕ್ಷ ಎಸ್‌.ಲಿಂಗಮೂರ್ತಿ ಅವರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವುದನ್ನು ಇಡೀ ದೇಶವೇ ನೋಡುತ್ತಿದೆ. ಸರ್ಕಾರ ಅತಂತ್ರ ಸ್ಥಿತಿಯಲ್ಲಿರುವ ಮಧ್ಯೆ ಕೂಡ ರೇವಣ್ಣ ಅವರು, ಲೋಕೋಪಯೋಗಿ, ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತರಾಜ್‌ ಇಲಾಖೆಯಲ್ಲಿನ ತಮ್ಮ ಒಕ್ಕಲಿಗ ಸಮುದಾಯಕ್ಕೆ ಸೇರಿದ ಸುಮಾರು 800 ಮಂದಿ ಎಂಜಿನಿಯರ್‌ಗಳಿಗೆ ಬಡ್ತಿ ನೀಡಿದ್ದಾರೆ. ಈ ಎಂಜಿನಿಯರ್‌ಗಳಿಂದ ಒಂದೇ ದಿನದಲ್ಲಿ . 50 ಕೋಟಿ ರು. ಲಂಚ ಪಡೆಯಲಾಗಿದೆ ಎಂದು ಆರೋಪಿಸಿದ್ದಾರೆ.

ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡಕ್ಕೆ ಸೇರಿದ ಸುಮಾರು 300 ಮಂದಿ ಎಂಜಿನಿಯರ್‌ಗಳು ಕಳೆದ 13 ತಿಂಗಳಿಂದ ಬಡ್ತಿಗಾಗಿ ಕಾಯುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗಳಂತೆ ವರ್ತತಿಸುತ್ತಿರುವ ಸಚಿವ ಎಚ್‌.ಡಿ.ರೇವಣ್ಣ ಅವರು ಎಲ್ಲಾ ಇಲಾಖೆಯಲ್ಲಿ ಬಡ್ತಿಯಲ್ಲಿ ಮಧ್ಯ ಪ್ರವೇಶಿ ತಮ್ಮ ಸಮುದಾಯದ ಅಧಿಕಾರಿಗಳಿಗೆ ಬಡ್ತಿ ಕೊಟ್ಟಿದ್ದಾರೆ. ಜು.1 ರಿಂದ ಜು.10ರವರೆಗೆ ನಡೆದ ಬಡ್ತಿ ಮತ್ತು ವರ್ಗಾವಣೆಯಲ್ಲಿ ರೇವಣ್ಣ ಸುಮಾರು 500 ಕೋಟಿ ರು. ಲಂಚ ಪಡೆದಿದ್ದಾರೆ.

800 ಎಂಜಿನಿಯರ್‌ಗಳಿಗೆ ನೀಡಿರುವ ಬಡ್ತಿ ಕ್ರಮಬದ್ಧವಾಗಿಲ್ಲ. ಕೂಡಲೇ ಈ ಬಡ್ತಿಯನ್ನು ರದ್ದುಗೊಳಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಬೇಕೆಂದು ರಾಜ್ಯಪಾಲರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.