ಅಚ್ಚರಿಯ ವಿಷಯವೆಂದರೆ, ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿ ರಾಜ್ಯವೆಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕ, ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ. ವಿವಿಧ ರಾಜ್ಯಗಳ ಜನಸಂಖ್ಯೆ, ಅಲ್ಲಿ ಕಳೆದ ನ.8ರ ಬಳಿಕ ಮಾಡಲಾದ ಡಿಜಿಟಲ್‌ ಪಾವತಿ ವರದಿಯನ್ನು ಕೇಂದ್ರ ಸರ್ಕಾರ ತನ್ನ ‘ಇ ತಾಲ್‌' ವೆಬ್‌ನಲ್ಲಿ ಪ್ರಕಟಿಸಿದೆ.

ನವದೆಹಲಿ: ಕಪ್ಪುಹಣ ನಿಗ್ರಹಿಸಲು ಕೇಂದ್ರ ಸರ್ಕಾರ ಕಳೆದ ಕೆಲ ಸಮಯದಿಂದ ಡಿಜಿಟಲ್‌ ಪಾವತಿಗೆ ಉತ್ತೇಜನ ನೀಡುತ್ತಿದೆ. ಅದರಲ್ಲೂ 2016ರ ನ.8 ಮಧ್ಯರಾತ್ರಿಯಿಂದ ಅಪನಗದೀಕರಣ ಪ್ರಕಟಣೆ ಬಳಿಕ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಆ್ಯಪ್‌ ಬಿಡುಗಡೆ, ಬಹುಮಾನ ನೀಡುವ ಯೋಜನೆ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಂಡಿದೆ.

ಅಚ್ಚರಿಯ ವಿಷಯವೆಂದರೆ, ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿ ರಾಜ್ಯವೆಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕ, ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ 23ನೇ ಸ್ಥಾನ ಪಡೆದುಕೊಂಡಿದೆ. ವಿವಿಧ ರಾಜ್ಯಗಳ ಜನಸಂಖ್ಯೆ, ಅಲ್ಲಿ ಕಳೆದ ನ.8ರ ಬಳಿಕ ಮಾಡಲಾದ ಡಿಜಿಟಲ್‌ ಪಾವತಿ ವರದಿಯನ್ನು ಕೇಂದ್ರ ಸರ್ಕಾರ ತನ್ನ ‘ಇ ತಾಲ್‌' ವೆಬ್‌ನಲ್ಲಿ ಪ್ರಕಟಿಸಿದೆ.

ಅಲ್ಲಿ ಪ್ರತಿ ರಾಜ್ಯದ ಡಿಜಿಟಲ್‌ ಪಾವತಿಯನ್ನು ಪ್ರತಿ 1000 ಜನರಿಗೆಂದು ಸರಾಸರಿ ತೆಗೆದು ಪ್ರಕಟಿಸಲಾಗಿದ್ದು, ಕರ್ನಾಟಕ 23ನೇ ಸ್ಥಾನ ಪಡೆದುಕೊಂಡಿದೆ. 6.11 ಕೋಟಿ ಜನ ಸಂಖ್ಯೆ ಹೊಂದಿದ ಕರ್ನಾಟಕದಲ್ಲಿ ಕಳೆದ 6 ತಿಂಗಳಲ್ಲಿ 4.69 ಕೋಟಿ ಡಿಜಿಟಲ್‌ ಪಾವತಿ ಮಾಡಲಾಗಿದೆ. ಅಂದರೆ ಪ್ರತಿ 1000 ಜನರಿಗೆ 768 ಡಿಜಿಟಲ್‌ ಪಾವತಿಯಾಗಿದೆ. ಈ ಪಟ್ಟಿಯಲ್ಲಿ ಲಕ್ಷದ್ವೀಪ (ಪ್ರತಿ ಸಾವಿರಕ್ಕೆ 6417), ತೆಲಂಗಾಣ (ಪ್ರತಿ ಸಾವಿರಕ್ಕೆ 6148) ಕೇರಳ (ಪ್ರತಿ ಸಾವಿರಕ್ಕೆ 4435) ಮೊದಲ 3 ಸ್ಥಾನ ಪಡೆದುಕೊಂಡಿವೆ.