ಬೆಂಗಳೂರು[ಜು.12]: ಆನಂದ್ ಸಿಂಗ್ ರಾಜೀನಾಮೆಯಿಂದ ಶುರುವಾದ ರಾಜಕೀಯ ಪ್ರಹಸನ ದಿನಕ್ಕೊಂದು ತಿರುವು ಪಡೆಯಲಾರಂಭಿಸಿದೆ. ಸರ್ಕಾರ ಪತನಗೊಳ್ಳುವ ಭೀತಿಯಲ್ಲಿದ್ದ ದೋಸ್ತಿ ಸರ್ಕಾರ ಸುಪ್ರೀಂ ಆದೇಶದ ಬೆನ್ನಲ್ಲೇ ವಿಶ್ವಾಸ ಮತ ಯಾಚನೆಯ ದಾಳ ಎಸೆದಿದೆ. ಸದ್ಯ ಸಿಎಂ ಕುಮಾರಸ್ವಾಮಿಯ ಈ ಹೇಳಿಕೆ ಮತ್ತೊಂದು ಪೊಲಿಟಿಕಲ್ ಹೈಡ್ರಾಮಾಗೆ ನಾಂದಿ ಹಾಡಿದೆ. ದೋಸ್ತಿ ವಲಯದಲ್ಲಿದ್ದ ಭೀತಿ ಸದ್ಯ ಬಿಜೆಪಿಗೆ ಆವರಿಸಿದೆ.

ಹೌದು ಅತೃಪ್ತ ಶಾಸಕರ ರಾಜೀನಾಮೆಯಿಂದ ಸರ್ಕಾರ ಪತನಗೊಳ್ಳುವ ಭೀತಿಯಲ್ಲಿತ್ತು. ಆದರೆ ಸ್ಪೀಕರ್ ನಡೆ ಅತೃಪ್ತ ಶಾಸಕರಿಗೆ ಕೊಂಚ ತಲೆನೋವು ನೀಡಿತ್ತು. ಒಂದೆಡೆ ರಾಜೀನಾಮೆ ಅಂಗೀಕಾರವಾಗದ ತಲೆನೋವಾದರೆ ಮತ್ತೊಂದೆಡೆ ಮನವೊಲಿಸಲು ಬಂದಿದ್ದ ನಾಯಕರನ್ನು ಎದುರಿಸಲಾಗದ ಪರಿಸ್ಥಿತಿ. ಹೀಗಿರುವಾಗ ಅತೃಪ್ತ ನಾಯಕರು ಸ್ಪೀಕರ್ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂ ಕೋರ್ಟ್ ಕೂಡಾ ಮುಂದಿನ ಆದೇಶದವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಅನರ್ಹತೆ ಮತ್ತು ರಾಜೀನಾಮೆಯ ಬಗ್ಗೆ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಪ್ರೀಂ ಕೋರ್ಟ್ ಈ ಆದೇಶ ಕೇಳಿದ ಬೆನ್ನಲ್ಲೇ ಸಿಎಂ ಕುಮಾರಸ್ವಾಮಿ ಸದನದಲ್ಲಿ ವಿಶ್ವಾಸಮತ ಯಾಚಿಸುವ ದಾಳ ಎಸೆದಿದ್ದಾರೆ. ಸದ್ಯ ಸಿಎಂ ನಡೆ ಬಿಜೆಪಿ ವಲಯದಲ್ಲಿ ಆತಂಕ ಸೃಷ್ಟಿಸಿದೆ. ಸರ್ಕಾರ ಬೀಳಲಿದೆ ಎಂದು ನಿರಾಳವಾಗಿದ್ದ ಬಿಜೆಪಿ ನಾಯಕರು ಸದ್ಯ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ರೆಸಾರ್ಟ್ ರಾಜಕಾರಣದ ಮೊರೆ ಹೋಗಿದ್ದಾರೆ.

ಒಂದೇ ಹೋಟೆಲ್ ನಲ್ಲಿ ರೂಂ ಸಿಗದ ಹಿನ್ನೆಲೆ, ಆರ್. ಅಶೋಕ್ ಸೇರಿದಂತೆ ನಾಲ್ವರು ಬಿಜೆಪಿ ನಾಯಕರ ನೇತೃತ್ವದಲ್ಲಿ ಬಿಜೆಪಿ ಶಾಸಕರು ರೆಸಾರ್ಟ್ ಕಡೆ ತೆರಳುವುದು ಖಚಿತವಾಗಿದ್ದು, ಎರಡು ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಟ್ಟಾರೆಯಾಗಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮುಂದುವರೆಸಿದ್ದಾರೆ ಎಂಬುವುದು ನಿಜ.