ಬೆಂಗಳೂರು [ಜು.15]:  ತೀವ್ರ ಮಳೆ ಕೊರತೆಯಿಂದ ಭೀಕರ ಬರದ ಆತಂಕ ಉಂಟಾಗಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಮಾಡುವ ರಾಜ್ಯ ಸರ್ಕಾರದ ಯೋಜನೆಗೆ ಕೊನೆಗೂ ಚಾಲನೆ ದೊರಕುವ ಹಂತ ಬಂದಿದ್ದು, ‘ವರ್ಷಧಾರೆ’ ಯೋಜನೆ ಕಾರ್ಯರೂಪಕ್ಕೆ ಇಳಿಸಲು ಅಗತ್ಯವಾದ ವಿಶೇಷ ವಿಮಾನ ಹಾಗೂ ರಾಡಾರ್‌ ಆಗಮಿಸಿವೆ. ಬಹುತೇಕ ಇನ್ನೊಂದು ವಾರದಲ್ಲಿ ಮೋಡ ಬಿತ್ತನೆ ಆರಂಭಿಸುವ ಲೆಕ್ಕಚಾರವನ್ನು ಸರ್ಕಾರ ಹೊಂದಿದೆ.

ಸದ್ಯ ಅಮೆರಿಕದಿಂದ ಒಂದು ವಿಮಾನ ಅಹಮದಾಬಾದ್‌ಗೆ ಬಂದಿಳಿದಿದೆ. ಒಂದೆರಡು ದಿನಗಳಲ್ಲಿ ಮತ್ತೊಂದು ವಿಮಾನ ಆಗಮಿಸಲಿದೆ. ನಂತರ ಆ ವಿಮಾನಗಳು ಬೆಂಗಳೂರಿನ ಜಕ್ಕೂರು ವಿಮಾನ ನಿಲ್ದಾಣಕ್ಕೆ ಬರಲಿವೆ. ಈ ನಡುವೆ, ಮೋಡ ಬಿತ್ತನೆ ಯೋಜನೆಗೆ ಈಗಾಗಲೇ ರಾಜ್ಯಕ್ಕೆ ತರಲಾಗಿರುವ ಒಂದು ರಾಡಾರನ್ನು ಹೆಬ್ಬಾಳದ ಜಿಕೆವಿಕೆ ಆವರಣದಲ್ಲಿ ಅಳವಡಿಸುವ ಕಾರ್ಯ ಭರದಿಂದ ಸಾಗಿದೆ. ಮತ್ತೆರಡು ರಾಡಾರ್‌ಗಳನ್ನು ತಂದು ಗದಗ ಮತ್ತು ರಾಯಚೂರು ಭಾಗದಲ್ಲಿ ಅಳವಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ವರ್ಷಧಾರೆ’ ಯೋಜನೆ ಮೂಲಕ ಈ ವರ್ಷ ಮುಂಗಾರು ಆರಂಭದಿಂದಲೇ ಮೋಡ ಬಿತ್ತನೆ ಆರಂಭಿಸಿ ಆಗಸ್ಟ್‌ ತಿಂಗಳವರೆಗೆ ಅಂದರೆ ಸತತ ಮೂರು ತಿಂಗಳ ಕಾಲ ಮೋಡ ಬಿತ್ತನೆ ಮಾಡಲು ಸರ್ಕಾರ ಬರೋಬ್ಬರಿ 91 ಕೋಟಿ ರು. ಮೊತ್ತದ ಟೆಂಡರ್‌ ಸಿದ್ಧಪಡಿಸಿತ್ತು. ಆದರೆ, ಅಷ್ಟರಲ್ಲಿ ಲೋಕಸಭಾ ಚುನಾವಣೆ ನೀತಿಸಂಹಿತೆ ಎದುರಾಗಿದ್ದರಿಂದ ಯೋಜನೆಗೆ ಮುಖ್ಯಮಂತ್ರಿ ಅವರು ಅನುಮೋದನೆ ನೀಡಲಾಗದೆ ಸಚಿವ ಸಂಪುಟದಲ್ಲಿ ಅನುಮೋದನೆ ಸಿಗುವುದು ತಡವಾಯಿತು. ಚುನಾವಣೆ ನಂತರ ಸಂಪುಟದ ಒಪ್ಪಿಗೆ ಪಡೆದು ಟೆಂಡರ್‌ ಅಂತಿಮಗೊಳಿಸಿದರೂ ಅಮೆರಿಕದಿಂದ ವಿಮಾನಗಳನ್ನು ತರಲು ಕೇಂದ್ರ ಸರ್ಕಾರದ ಒಪ್ಪಿಗೆ ಸಿಗುವುದು ತಡವಾಗಿದ್ದರಿಂದ ಮೋಡ ಬಿತ್ತನೆಗೆ ದಿನಗಳನ್ನು ಮುಂದೂಡುತ್ತಾ ಬರಲಾಗಿತ್ತು. ಇದೀಗ ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕ ಬೆನ್ನಲ್ಲೇ ಅಮೆರಿಕದ ಬೋಯಿಂಗ್‌ ಕಂಪನಿ ಸಿದ್ಧಪಡಿಸಿರುವ ಒಂದು ವಿಮಾನ ಅಹಮದಾಬಾದ್‌ಗೆ ಬಂದಿಳಿದಿದೆ. ಇನ್ನೊಂದು ವಿಮಾನ ಇನ್ನೆರಡು ದಿನದಲ್ಲಿ ಬರಲಿದೆ. ನಂತರ ಅವು ಬೆಂಗಳೂರಿಗೆ ಬರಲಿವೆ.

ಈ ವಿಶೇಷ ವಿಮಾನ ಅಹಮದಾಬಾದ್‌ಗೆ ಬಂದಿಳಿದಿರುವ ಬಗ್ಗೆ ಮೋಡ ಬಿತ್ತನೆ ಹೊಣೆ ಹೊತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮುಖ್ಯ ಇಂಜಿನಿಯರ್‌ ಡಾ.ಪ್ರಕಾಶ್‌ ಕುಮಾರ್‌  ಮಾಹಿತಿ ನೀಡಿದ್ದಾರೆ. ಕೆಲವೇ ದಿನಗಳಲ್ಲಿ ಇನ್ನೊಂದು ವಿಮಾನ ಅಮೆರಿಕದಿಂದ ಬರಲಿದ್ದು, ಬಳಿಕ ಅವುಗಳನ್ನು ಬೆಂಗಳೂರಿಗೆ ತರಲಾಗುವುದು. ಜಿಕೆವಿಕೆ ಆವರಣದಲ್ಲಿ ರಾಡಾರ್‌ ಅಳವಡಿಕೆ ಸೇರಿದಂತೆ ಇನ್ನೊಂದು ವಾರದಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

3 ರಾಡಾರ್‌ಗಳ ಅಳವಡಿಕೆ:

ಮೋಡ ಬಿತ್ತನೆಗೆ ಈ ಬಾರಿ ಮೂರು ರಾಡಾರ್‌ಗಳ ಬಳಕೆ ಮಾಡಲಾಗುತ್ತದೆ. ಸದ್ಯ ಒಂದು ರಾಡಾರ್‌ಅನ್ನು ತಂದು ಬೆಂಗಳೂರಿನ ಜಿಕೆವಿಕೆ ಆವರಣದ 100 ಅಡಿ ಎತ್ತರದ ಕಟ್ಟಡದ ಮೇಲೆ ಅಳವಡಿಸಲಾಗುತ್ತಿದೆ. ಇನ್ನೆರಡು ರಾಡಾರ್‌ಗಳು ಒಂದೆರಡು ದಿನಗಳಲ್ಲಿ ನಗರಕ್ಕೆ ಬರಲಿವೆ. ಅವುಗಳಲ್ಲಿ ಒಂದನ್ನು ಗದಗದಲ್ಲಿ, ಮತ್ತೊಂದನ್ನು ಯಾದಗಿರಿ ಜಿಲ್ಲೆಯ ಶೋರಾಪುರದಲ್ಲಿ ಅಳವಡಿಸಲಾಗುವುದು. ರಾಡಾರ್‌ಗಳು ನೀಡುವ ಮಾಹಿತಿ ಆಧರಿಸಿ ಅವುಗಳ ಸುತ್ತಲಿನ ಸುಮಾರು 300 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಮೋಡ ಬಿತ್ತನೆ ನಡೆಸಲಾಗುವುದು. ರಾಜ್ಯದಲ್ಲಿರುವ 6 ಸಾವಿರಕ್ಕೂ ಹೆಚ್ಚು ಮಳೆ ಮಾಪನ ಕೇಂದ್ರಗಳಿಂದ ಯಾವ ಭಾಗದಲ್ಲಿ ಕಡಿಮೆ ಮಳೆಯಾಗಿದೆ ಎಂಬ ಮಾಹಿತಿ ಪಡೆದು ಕಡಿಮೆ ಮಳೆಯಾಗಿರುವ ಪ್ರದೇಶದಲ್ಲಿ ಹೆಚ್ಚು ಮೋಡ ಬಿತ್ತನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017ರ ಮೋಡ ಬಿತ್ತನೆಯಿಂದ ಶೇ.28 ಹೆಚ್ಚು ಮಳೆ

ಸರ್ಕಾರದ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಈವರೆಗೆ 2003 ಮತ್ತು 2017ರಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. 2003ರಲ್ಲಿ ಮೋಡ ಬಿತ್ತನೆ ಅಷ್ಟೇನೂ ಪ್ರಯೋಜನ ನೀಡಿಲ್ಲ. 2017ರಲ್ಲಿ ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಮೋಡ ಬಿತ್ತನೆ ನಡೆಸಿದ್ದ ಪ್ರದೇಶಗಳಲ್ಲಿ ಶೇ.28ರಷ್ಟುಹೆಚ್ಚುವರಿ ಮಳೆಯಾಗಿದೆ.

ಬಹುತೇಕ ಎಲ್ಲ ಮೋಡಗಳಲ್ಲೂ ತೇವಾಂಶ ಇರುತ್ತದೆ. ಆದರೆ, ಶೇ.40ರಿಂದ 50ರಷ್ಟು ತೇವಾಂಶ ಇರುವ ಮೋಡಗಳಿಗೆ ಬಿತ್ತನೆ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ. ಯಾವ ಮೋಡ ಎಷ್ಟುಗಾತ್ರ ಹೊಂದಿದೆ, ಅದರಲ್ಲಿ ಎಷ್ಟುತೇವಾಂಶ ಇದೆ ಎಂಬ ಮಾಹಿತಿಯು ರಾಡಾರ್‌ಗಳಿಂದ ಲಭ್ಯವಾಗುತ್ತದೆ. ಹೆಚ್ಚು ತೇವಾಂಶ ಇರುವ ಮೋಡಗಳಿಗೆ ಬಿತ್ತನೆ ಮಾಡಲಾಗುತ್ತದೆ ಎಂದು ಮೋಡಬಿತ್ತನೆ ತಾಂತ್ರಿಕ ಸಮಿತಿಯ ಅಧಿಕಾರಿಯೊಬ್ಬರು ಹೇಳಿದರು.

ಮೋಡ ಬಿತ್ತನೆಗೆ ಅಮೆರಿಕದಿಂದ ಎರಡು ವಿಶೇಷ ವಿಮಾನಗಳನ್ನು ತರಿಸಲಾಗುತ್ತಿದೆ. ಇದರಲ್ಲಿ ಒಂದು ವಿಮಾನ ಈಗಾಗಲೇ ಅಹಮದಾಬಾದ್‌ ತಲುಪಿದೆ. ಒಂದೆರಡು ದಿನಗಳಲ್ಲಿ ಇನ್ನೊಂದು ವಿಮಾನ ಬರಲಿದೆ. ಬಳಿಕ ಅವುಗಳನ್ನು ರಾಜ್ಯಕ್ಕೆ ತರಲಾಗುವುದು. ಇನ್ನೊಂದು ವಾರದಲ್ಲಿ ಮೋಡ ಬಿತ್ತನೆ ಆರಂಭಿಸಲಾಗುವುದು. ಇದಕ್ಕೆ ಬೆಂಗಳೂರು, ಗದಗ ಮತ್ತು ರಾಯಚೂರಿನಲ್ಲಿ ಮೂರು ರಾಡಾರ್‌ ಅಳವಡಿಸಲಾಗುವುದು.

- ಡಾ.ಪ್ರಕಾಶ್‌ ಕುಮಾರ್‌, ಗ್ರಾಮೀಣಾಭಿವೃದ್ಧಿ ಇಲಾಖೆ ಮುಖ್ಯ ಇಂಜಿನಿಯರ್‌

ವರದಿ :  ಲಿಂಗರಾಜು ಕೋರಾ