ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಬೇಕು, ಒಲಿಂಪಿಕ್ಸ್'ನಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬ ಕನಸು ಹೊತ್ತಿರುವ ರಾಜ್ಯದ ಶೂಟರ್ಗಳಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ರಾಜ್ಯದ ಶೂಟಿಂಗ್ ಕ್ರೀಡಾಪಟುಗಳಿಗಾಗಿ ಅಂತಾರಾಷ್ಟ್ರೀಯ ದರ್ಜೆಯ ಶೂಟಿಂಗ್ ರೇಂಜ್ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ. ಮುಂದಿನ ಬಜೆಟ್ನಲ್ಲಿ ಇದನ್ನು ಘೋಷಣೆ ಮಾಡಲು ರಾಜ್ಯ ಸರ್ಕಾರ ಚಿಂತಿಸಿದೆ.
ಬೆಂಗಳೂರು(ಡಿ. 31): ಕರ್ನಾಟಕದ ಶೂಟಿಂಗ್ ಕ್ರೀಡಾಪಟುಗಳು ಶೂಟಿಂಗ್ ಅಭ್ಯಾಸಕ್ಕಾಗಿ ಇನ್ನು ಮುಂದೆ ಚಿಂತಿಸುವ ಅಗತ್ಯವಿಲ್ಲ. ಶೂಟರ್'ಗಳಿಗಾಗಿ ರಾಜ್ಯ ಸರ್ಕಾರವೇ ಶೂಟಿಂಗ್ ರೇಂಜ್ ನಿರ್ಮಿಸಲು ಮುಂದಾಗಿದೆ. ಶೂಟಿಂಗ್ ರೇಂಜ್ ಅಂದ್ರೆ ರೈಫಲ್ ಶೂಟಿಂಗ್ ಅಭ್ಯಾಸಕ್ಕೆ ಬೇಕಾದ ಒಂದು ಅತ್ಯಾಧುನಿಕ ವ್ಯವಸ್ಥೆ. ಆದ್ರೆ ಈವರೆಗೆ ಇಡೀ ರಾಜ್ಯದಲ್ಲಿ ಎಲ್ಲೂ ರಾಜ್ಯದ ಶೂಟಿಂಗ್ ಕ್ರೀಡಾಪಟುಗಳಿಗಾಗಿ ಶೂಟಿಂಗ್ ರೇಂಜ್ ಇರಲಿಲ್ಲ. ಹೀಗಾಗಿ ಈಗ ರಾಜ್ಯ ಸರ್ಕಾರ ಶೂಟಿಂಗ್ ರೇಂಜ್ ಸ್ಥಾಪನೆಗೆ ಚಿಂತನೆ ನಡೆಸಿದೆ. ಅಂದಾಜು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನಲ್ಲೇ ಈ ರೇಂಜ್ ಸ್ಥಾಪನೆಯಾಗಲಿದ್ದು, ಮುಂದಿನ ಫೆಬ್ರವರಿಯಲ್ಲಿ ಮಂಡನೆಯಾಗಲಿರುವ ರಾಜ್ಯ ಬಜೆಟ್ನಲ್ಲಿ ಘೋಷಣೆಯಾಗುವ ಸಾಧ್ಯತೆಯಿದೆ.
ಅಸಲಿಗೆ ರಾಜ್ಯದಲ್ಲಿ ಇಂತಹದೊಂದು ಶೂಟಿಂಗ್ ರೇಂಜ್ನ ಅವಶ್ಯಕತೆ ಇದೆ ಎಂಬುದು ಕೂಡಾ ರಾಜ್ಯ ಸರ್ಕಾರದ ಗಮನದಲ್ಲೇ ಇರಲಿಲ್ಲ. ಇತ್ತೀಚೆಗೆ ವಿಕಾಸಸೌಧದಲ್ಲಿ ನಡೆದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜನ ಮನ ಸಂವಾದ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದ ಶೂಟರ್ ಒಬ್ಬರು ಈ ಕೊರತೆಯ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರು. ಈ ಬೇಡಿಕೆಗೆ ತಕ್ಷಣ ಸ್ಪಂದಿಸಿರುವ ಕ್ರೀಡಾ ಸಚಿವರು ಕೂಡಲೇ ಕ್ರಿಯಾ ಯೋಜನೆ ಸಿದ್ದಪಡಿಸಲು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಆದ್ರೆ ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯ ರಾಜ್ಯದ ಶೂಟರ್ಗಳಿಗೂ ಲಭಿಸಬೇಕಾದ್ರೆ ರಾಜ್ಯದಲ್ಲೇ ಸುಸಜ್ಜಿತ ರೇಂಜ್ನ ಅಗತ್ಯತೆಯಿದೆ.
ಸದ್ಯ ರಾಜ್ಯದ ಶೂಟಿಂಗ್ ಕ್ರೀಡಾಪಟುಗಳೆಲ್ಲರೂ ಬೆಂಗಳೂರಿನ ಕೆಂಗೇರಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ನಿರ್ವಹಣೆಯಲ್ಲಿರುವ ಜಗದಾಳೆ ಶೂಟಿಂಗ್ ರೇಂಜ್'ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅಲ್ಲದೇ ಶೂಟಿಂಗ್ ಸಂಬಂಧಿತ ಅಭ್ಯಾಸ, ಸ್ಫರ್ಧೆಗಳು ಸದ್ಯ ಜಗದಾಳೆ ಶೂಟಿಂಗ್ ರೇಂಜ್'ನಲ್ಲೇ ನಡೆಯುತ್ತಿವೆ. ಆದ್ರೆ ನಾವು ಕೂಡಾ ಒಲಿಂಪಿಕ್ಸ್'ನಲ್ಲಿ ಪದಕ ಗೆಲ್ಲಬೇಕಾದ್ರೆ ನಮಗೂ ಸುಸಜ್ಜಿತ ಶೂಟಿಂಗ್ ರೇಂಜ್ ಬೇಕು ಅನ್ನೋದು ಕ್ರೀಡಾಳುಗಳ ಬೇಡಿಕೆಯಾಗಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರ್ಕಾರವೂ ಸ್ಪಂದಿಸಿದ್ರೆ ಒಲಿಂಪಿಕ್ಸ್'ನಲ್ಲಿ ರಾಜ್ಯದ ಶೂಟರ್'ಗಳನ್ನೂ ಕಾಣಬಹುದು.
- ಕಿರಣ್ ಹನಿಯಡ್ಕ, ಪೊಲಿಟಿಕಲ್ ಬ್ಯೂರೋ, ಸುವರ್ಣ ನ್ಯೂಸ್
