Asianet Suvarna News Asianet Suvarna News

ಪ್ರಾಥಮಿಕ ಶಾಲೆಗೆ 10,000 ಶಿಕ್ಷಕರ ನೇಮಕ

ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 10 ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಆಯ್ಕೆಯಾದ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಕೂಡಲೇ ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿ ರದ್ದಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ತಿಳಿಸಿದ್ದಾರೆ.

Karnataka Govt Recrute 10000 Teachers
Author
Bengaluru, First Published Jul 11, 2018, 11:01 AM IST

ವಿಧಾನಸಭೆ :  ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 10 ಸಾವಿರ ಪದವೀಧರ ಶಿಕ್ಷಕರ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಆಯ್ಕೆಯಾದ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ಕೂಡಲೇ ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿ ರದ್ದಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ತಿಳಿಸಿದ್ದಾರೆ.

ಪ್ರಶ್ನೋತ್ತರ ಅವಧಿಯಲ್ಲಿ ಶಿಕ್ಷಕರ ನೇಮಕಾತಿ ಸಂಬಂಧ ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 2018-19ನೇ ಸಾಲಿಗೆ ಒಟ್ಟು 25,600 ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ. ಈ ಪೈಕಿ ಪ್ರಾಥಮಿಕ ಶಾಲೆಯಲ್ಲಿ ಖಾಲಿ ಇರುವ 12,500 ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿಯಿರುವ 3,100 ಹುದ್ದೆಗಳು ಸೇರಿದಂತೆ ಒಟ್ಟು 15,600 ಹುದ್ದೆಗಳಿಗೆ ಹಾಗೂ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ 10 ಸಾವಿರ ಪದವೀಧರ ಶಾಲಾ ಶಿಕ್ಷಕರ ಹುದ್ದೆಗಳಿಗೆ ಆಯ್ಕೆಗೊಂಡ ನಂತರ ತಕ್ಷಣ ರದ್ದಾಗುವ ಷರತ್ತಿಗೆ ಒಳಪಟ್ಟು ಅಗತ್ಯವಿರುವೆಡೆ ತಾತ್ಕಾಲಿಕ ಅತಿಥಿ ಶಿಕ್ಷಕರ ನೇಮಕಾತಿಗೂ ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

ಪಿಯು ಕಾಲೇಜುಗಳು ಸ್ಥಳಾಂತರ!

ರಾಜ್ಯದಲ್ಲಿ 58 ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಂತ ಕಡಿಮೆಯಿದೆ. ಇಂತಹ ಕಾಲೇಜುಗಳನ್ನು ಅಗತ್ಯವಿರುವ ಕಡೆ ಸ್ಥಳಾಂತರ ಮಾಡಲಾಗುವುದು. ಸ್ಥಳಾಂತರ ಮಾಡುವ ವೇಳೆ ಆಡಳಿತ ಹಾಗೂ ಪ್ರತಿಪಕ್ಷ ಎಂಬ ಭೇದಭಾವ ತೋರದೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸ್ಥಳಾಂತರ ಮಾಡುವ ಭರವಸೆಯನ್ನು ಈ ವೇಳೆ ಅವರ ನೀಡಿದರು.

ಗಿರಿ ಭತ್ಯೆ ಪರಿಶೀಲನೆ

ಬೆಟ್ಟಗಳು ಹೆಚ್ಚಿರುವ ಕೊಡಗು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಾಲಾ ಶಿಕ್ಷಕರಿಗೆ ಗಿರಿ ಭತ್ಯೆ ನೀಡುವ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಶೀಘ್ರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಮಹೇಶ್‌ ಸದನಕ್ಕೆ ತಿಳಿಸಿದರು.

ಕಾಂಗ್ರೆಸ್‌ನ ಆರ್‌.ನರೇಂದ್ರ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ 21 ಶಾಲೆಗಳ ಸುಮಾರು 52 ಶಿಕ್ಷಕರಿಗೆ ಗಿರಿ ಭತ್ಯೆಯನ್ನು ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪ್ರಸ್ತುತ ಬೆಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರಿ ನೌಕರರಿಗೆ ಗಿರಿಭತ್ಯೆ ನೀಡಲಾಗುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಈ ಸೌಲಭ್ಯ ನೀಡುವ ಅವಕಾಶ ನಿಯಮಗಳಲ್ಲಿ ಇಲ್ಲ ಎಂದರು.

ಇದಕ್ಕೆ ಪ್ರತಿಪಕ್ಷಗಳ ಹಲವು ಸದಸ್ಯರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಕೊಡಗು ಹಾಗೂ ಮಲೆನಾಡು ಜಿಲ್ಲೆಗಳ ಗ್ರಾಮೀಣ ಭಾಗದ ಶಿಕ್ಷಕರಿಗೂ ಗಿರಿ ಭತ್ಯೆ ನೀಡುವ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದರು.

Follow Us:
Download App:
  • android
  • ios