ಸಿಎಂ ಕುಮಾರಸ್ವಾಮಿ ನೇತೃತ್ವದ ಕರ್ನಾಟಕ ಸರ್ಕಾರ ಮತ್ತೊಂದು ಭರ್ಜರಿ ನ್ಯೂಸ್ ನೀಡುತ್ತಿದೆ. ಜನಸಂಖ್ಯೆ ಆಧಾರದಲ್ಲಿ ಮದ್ಯಂದಡಿ ತೆರೆಯಲು ಲೈಸೆನ್ಸ್ ನೀಡುವ ಬಗ್ಗೆ ಸಮೀಕ್ಷೆ ನಡೆಸಲು ನಿರ್ಧಾರ ಮಾಡಿದೆ. 

ಬೆಂಗಳೂರು : ರಾಜ್ಯದಲ್ಲಿ ಮತ್ತೆ ವೈನ್ ಶಾಪ್‌ಗಳಿಗೆ ಪರವಾನಗಿ ನೀಡಲು ರಾಜ್ಯ ಸರ್ಕಾರ ಸಜ್ಜಾಗಿರುವಂತಿದ್ದು, ತಾಲೂಕು ಪ್ರದೇಶಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಎಲ್ಲೆಲ್ಲಿ ಮತ್ತು ಎಷ್ಟು ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಬಹುದು ಎಂಬ ಬಗ್ಗೆ ಸಮೀಕ್ಷೆ ನಡೆಸುವಂತೆ ಸುತ್ತೋಲೆ ಹೊರಡಿಸಿದೆ.

ಅಬಕಾರಿ ಆಯುಕ್ತರು ಎಲ್ಲಾ ಅಬಕಾರಿ ಉಪ ಆಯು ಕ್ತರಿಗೆ ಇತ್ತೀಚೆಗೆ ಎಲ್ಲ ಅಬಕಾರಿ ಉಪ ಆಯುಕ್ತರುಗಳಿಗೆ ಆದೇಶ ನೀಡಿದ್ದು, ತಾಲೂಕು ಗಳಲ್ಲಿ ಹೊಸದಾಗಿ ಚಿಲ್ಲರೆ ಮದ್ಯ ಮಾರಾಟದ ಅಂಗಡಿ ತೆರೆಯಲು ಅವಶ್ಯವಿರುವ ಸಿಎಲ್- 2 (ಚಿಲ್ಲರೆ ಮದ್ಯ ಮಾರಾಟ ಮಳಿಗೆ) ಸನ್ನದುಗಳ ಕುರಿತು ಮಾಹಿತಿ ಕ್ರೋಡೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿದ್ದಾರೆ. 

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಅಬಕಾರಿ ಉಪ ಆಯುಕ್ತರುಗಳು ಕಾರ್ಯೋನ್ಮುಖವಾಗಿದ್ದು, ಮದ್ಯದಂಗಡಿಗಳನ್ನು ಎಲ್ಲೆಲ್ಲಿ ತೆರೆಯಬಹುದು ಎಂಬುದರ ಕುರಿತು ಸಮೀಕ್ಷೆಯಲ್ಲಿ ತೊಡಗಿದ್ದಾರೆ. ಈ ಕುರಿತು ತಿಂಗಳಾಂತ್ಯದೊಳಗೆ ಸರ್ಕಾ ರಕ್ಕೆ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. 

ಜನಾಕ್ರೋಶ ಸಂಭವ: ಈ ಹಿಂದೆ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡುವುದಿಲ್ಲ ಎಂದು ಸರ್ಕಾರ ಘೋಷಿಸಿತ್ತು. ಆದರೆ ಕಳೆದ ಸರ್ಕಾರದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಒಂದು ಸಾವಿರಕ್ಕೂ ಅಧಿಕ ವೈನ್ ಶಾಪ್‌ಗಳಿಗೆ ಅನುಮತಿ ನೀಡುವುದಾಗಿ ಹೇಳಿಕೆ ನೀಡಿದ್ದು, ವಿವಾದಕ್ಕೆಕಾರಣವಾಗಿತ್ತು. ಈ ಯೋಜನೆ ಕುರಿತು ವ್ಯಾಪಕ ಟೀಕೆ ಕೇಳಿಬಂದಿದ್ದರಿಂದ ಯೋಜನೆಯನ್ನು ಸಿದ್ದರಾಮಯ್ಯ ಕೈಬಿಟ್ಟಿದ್ದರು. 

ಆದರೆ, ಈಗ ಹೊಸ ಮದ್ಯದಂಗಡಿ ತೆರೆಯಲು ಶಿಫಾರಸು ಮಾಡುವಂತೆ ಸರ್ಕಾರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. 

1000 ಕ್ಕೂ ಹೆಚ್ಚು ಮದ್ಯದಂಗಡಿ?: ರಾಜ್ಯದಲ್ಲಿ 2016 - 17ರಲ್ಲಿ 3953 ಇದ್ದ ಚಿಲ್ಲರೆ ಮದ್ಯದಂಗಡಿಗಳು 2017 - 18 ರಲ್ಲಿ ಒಟ್ಟು3920 ಕ್ಕೆ ತಲುಪಿದ್ದವು. 2011ರ ಜನಗಣತಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ 15 ಸಾವಿರ ಜನಸಂಖ್ಯೆಗೆ ಒಂದು, ಪಟ್ಟಣ ಪ್ರದೇಶದಲ್ಲಿ ಏಳೂವರೆ ಸಾವಿರಕ್ಕೆ ಒಂದು ಮದ್ಯದಂಗಡಿ ಇರಬೇಕು ಎಂಬ ನಿಯಮ ಮಾಡಿಕೊಳ್ಳಲಾಯಿತು. ಈ ಜನಗಣತಿ ಲೆಕ್ಕಾಚಾರದ ಪ್ರಕಾರ ಕೊಡುವುದಾದೆ ಸಾವಿರಕ್ಕೂ ಹೆಚ್ಚು ಮದ್ಯದಂಗಡಿಗೆ ಹೊಸದಾಗಿ ಪರವಾನಗಿ ಕೊಡಬೇಕಾಗುತ್ತದೆ.