ಬೆಂಗಳೂರು :  ರಾಜ್ಯ ಸರ್ಕಾರ ಏಳು ಮಂದಿ ಹಿರಿಯ ಐಪಿಎಸ್‌, ಎಂಟು ಐಎಎಸ್‌ ಅಧಿಕಾರಿಗಳು ಹಾಗೂ ಏಳು ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ ನೀಡಿ ವರ್ಗಾವಣೆ ಮಾಡುವ ಮೂಲಕ ಹೊಸ ವರ್ಷದ ಕೊಡುಗೆ ನೀಡಿದೆ. ಇದೇ ವೇಳೆ 25 ಐಎಎಸ್‌ ಅಧಿಕಾರಿಗಳಿಗೆ ಕಿರಿಯ ಆಡಳಿತ ದರ್ಜೆಗೆ ಬಡ್ತಿ ನೀಡಲಾಗಿದೆ.

ಸೇವಾ ಹಿರಿತನ ಆಧಾರದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಬಿ.ಆರ್‌.ರವಿಕಾಂತೇಗೌಡ ಸೇರಿದಂತೆ ಏಳು ಮಂದಿ ಹಿರಿಯ ಐಪಿಎಸ್‌ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಸೋಮವಾರ ಸರ್ಕಾರ ವರ್ಗಾಯಿಸಿದೆ. ಡಿಐಜಿ ಹುದ್ದೆಯಲ್ಲಿದ್ದ ಎಚ್‌.ಎಸ್‌.ರೇವಣ್ಣ ಅವರು ಐಜಿಪಿ ಸ್ಥಾನಕ್ಕೆ ಮುಂಬಡ್ತಿ ಪಡೆದಿದ್ದು, ಅವರನ್ನು ಉತ್ತರ ವಲಯಕ್ಕೆ ನಿಯೋಜಿಸಲಾಗಿದೆ.

8 ಐಎಎಸ್‌ ಅಧಿಕಾರಿಗಳಿಗೆ ಬಡ್ತಿ:

ಫೌಜಿಯಾ ತರನಂ (ಹಿರಿಯ ಉಪವಿಭಾಗಾಧಿಕಾರಿ, ಕೊಳ್ಳೇಗಾಲ ಉಪವಿಭಾಗ, ಚಾಮರಾಜನಗರ ಜಿಲ್ಲೆ), ಲಕ್ಷ್ಮೇಕಾಂತ ರೆಡ್ಡಿ (ಹಿರಿಯ ಉಪವಿಭಾಗಾಧಿಕಾರಿ, ಸಕಲೇಶಪುರ ಉಪವಿಭಾಗ, ಹಾಸನ ಜಿಲ್ಲೆ), ಡಾ.ರಾಜ (ಮುಖ್ಯಕಾರ್ಯನಿರ್ವಹಣಾಧಿಕಾರಿ ಕಲಬುರ್ಗಿ ಜಿಲ್ಲಾ ಪಂಚಾಯತ್‌), ಭೂಪಾಲನ್‌ ಟಿ. (ಹಿರಿಯ ಉಪವಿಭಾಗಾಧಿಕಾರಿ, ಕುಂದಾಪುರ ಉಪವಿಭಾಗ, ಉಡುಪಿ ಜಿಲ್ಲೆ), ನಿತೀಶ್‌ ಕೆ. (ಹಿರಿಯ ಉಪವಿಭಾಗಾಧಿಕಾರಿ, ಹುಣಸೂರು ಉಪವಿಭಾಗ, ಮೈಸೂರು ಜಿಲ್ಲೆ), ಕೆ.ಲಕ್ಷ್ಮೇ ಪ್ರಿಯಾ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕೊಡಗು ಜಿ.ಪಂ.), ಮೊಹಮ್ಮದ್‌ ರೋಶನ್‌ (ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉತ್ತರ ಕನ್ನಡ ಜಿ.ಪಂ.), ಡಾ. ಸುಶೀಲಾ ಬಿ. (ಹಿರಿಯ ಉಪವಿಭಾಗಾಧಿಕಾರಿ, ಸೇಡಂ ಉಪವಿಭಾಗ, ಕಲಬುರಗಿ).

ಕೇಂದ್ರ ಸೇವೆಗೆ ಡಿ.ವಿ.ಪ್ರಸಾದ್‌:

ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿದ್ದ ಡಿ.ವಿ.ಪ್ರಸಾದ್‌ ಅವರು ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ವರ್ಗಾವಣೆಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ರಾಜ್ಯ ಸೇವೆಯಿಂದ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ಎಸ್ಪಿಯಿಂದ ಡಿಐಜಿ:

ಎಸ್ಪಿ ದರ್ಜೆಯಲ್ಲಿದ್ದ ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ (ಕೊಚ್ಚಿನ್‌)ರಾದ ಅಭಿಷೇಕ್‌ ಗೋಯೆಲ್‌, ಕರ್ನಾಟಕ ವಲಯದ ರಮಣ ಗುಪ್ತ ಹಾಗೂ ಕೇಂದ್ರ ಗುಪ್ತ ದಳದ ಜಂಟಿ ನಿರ್ದೇಶಕ ಕೌಶಲೇಂದ್ರ ಕುಮಾರ್‌ ಅವರು ಡಿಐಜಿ ಸ್ಥಾನಕ್ಕೇರಿದ್ದು, ಈ ಮೂವರು ಕೇಂದ್ರ ಸೇವೆಯಲ್ಲಿ ಮುಂದುವರೆದಿದ್ದಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ.ಬಿ.ಆರ್‌.ರವಿಕಾಂತೇಗೌಡ ಅವರು ಅಗ್ನಿಶಾಮಕ ದಳದ ಡಿಐಜಿಯಾಗಿ ನೇಮಕಗೊಂಡರೆ, ಆರ್‌.ದಿಲೀಪ್‌ ಅವರಿಗೆ ಡಿಜಿಪಿ ಕಚೇರಿಯಲ್ಲಿ ಸ್ಥಾನ ನೀಡಲಾಗಿದೆ. ಇನ್ನು ಮುಂಬಡ್ತಿ ನೀಡಿ ಎಸ್‌.ಎನ್‌.ಸಿದ್ದರಾಮಪ್ಪ ಅವರನ್ನು ಆಂತರಿಕ ಭದ್ರತಾ ವಿಭಾಗದಲ್ಲೇ ಮುಂದುವರೆಸಲಾಗಿದೆ. ರವಿಕಾಂತೇಗೌಡರಿಂದ ತೆರವಾದ ದಕ್ಷಿಣ ಕನ್ನಡದ ಎಸ್ಪಿ ಹುದ್ದೆಗೆ ಬಿ.ಎಂ.ಲಕ್ಷ್ಮೇ ಪ್ರಸಾದ್‌ ನೇಮಕವಾಗಿದ್ದಾರೆ. ಹಿರಿತನ ಆಧಾರದಲ್ಲಿ ಡಾ.ಚಂದ್ರಗುಪ್ತ ಹಾಗೂ ಕೆ.ತ್ಯಾಗರಾಜನ್‌ ಅವರು ವೇತನ ಶ್ರೇಣಿಯಲ್ಲಿ ಮುಂದಿನ ಹಂತ ತಲುಪಿದ್ದಾರೆ.

7 ಐಎಫ್‌ಎಸ್‌ ಅಧಿಕಾರಿಗಳಿಗೆ ಬಡ್ತಿ, ವರ್ಗಾವಣೆ:

ಅಂಬಾಡಿ ಮಾಧವ (ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವೃತ್ತ), ವೆಂಕಟೇಶ್‌ ಬಿ.(ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೆಆರ್‌ಐಡಿಎಲ್‌, ಬೆಂಗಳೂರು), ಪಾಲಯ್ಯ ಒ.(ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕಿಯೋನಿಕ್ಸ್‌, ಬೆಂಗಳೂರು), ಡಾ. ಸುನೀಲ್‌ ಪನ್ವಾರ್‌ (ಅರಣ್ಯ ಸಂರಕ್ಷಣಾಧಿಕಾರಿ, ನಿರ್ದೇಶಕರು,ನಿರ್ದೇಶಕರು, ಎಲೆಕ್ಟ್ರಾನಿಕ್‌ ಡೆಲಿವೆರಿ ಆಫ್‌ ಸಿಟಿಜನ್‌ ಸರ್ವಿಸ್‌, ಎಂ.ಎಸ್‌. ಬಿಲ್ಡಿಂಗ್‌ ಬೆಂಗಳೂರು), ಡಾ. ಪ್ರಶಾಂತಕುಮಾರ್‌ ಕೆ.ಸಿ. (ಉಪ ಅರಣ್ಯಸಂರಕ್ಷಣಾಧಿಕಾರಿ, ಮೈಸೂರು ವಿಭಾಗ, ಮೈಸೂರು),ಡಾ. ಕೆ.ಟಿ. ಹನುಮಂತಪ್ಪ (ಅರಣ್ಯಸಂರಕ್ಷಣಾಧಿಕಾರಿ, ಧಾರವಾಡ),ರುತ್ರೇನ್‌ ಪಿ. (ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ ಕಾರ್ಕಳ).

25 ಅಧಿಕಾರಿಗಳಿಗೆ ಬಡ್ತಿ, ವೇತನ ಹೆಚ್ಚಳ:

ಇದೇ ವೇಳೆ 2010ನೇ ಬ್ಯಾಚಿನ 25 ಐಎಎಸ್‌ ಅಧಿಕಾರಿಗಳಿಗೆ ಕಿರಿಯ ಆಡಳಿತ ಗ್ರೇಡ್‌ಗೆ ಬಡ್ತಿ ನೀಡಲಾಗಿದೆ.

ಪ್ರೊಬೇಷನರಿ ಅವಧಿ ಮುಗಿಸಿದ ನಾಲ್ವರು ಐಪಿಎಸ್‌ ಅಧಿಕಾರಿಗಳಿಗೆ ಸ್ವತಂತ್ರ ನಿರ್ವಹಣೆ ಹುದ್ದೆ ನೀಡಿ ಸರ್ಕಾರ ಆದೇಶಿಸಿದೆ. ಅವರ ಪಟ್ಟಿಇಂತಿದೆ: ಅರುಣಾಕ್ಷು ಗಿರಿ- ಎಸ್ಪಿ, ನಕ್ಸಲ್‌ ನಿಗ್ರಹ ಪಡೆ ಉಡುಪಿ, ಸೋನಾನ್ವೆ ರಿಷಿಕೇಶ್‌ ಭಗ್ವಾನ್‌- ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು, ಡಿ.ಎಲ್‌.ನಾಗೇಶ್‌ -ಸಿಐಡಿ ಹಾಗೂ ಲೋಕೇಶ್‌ ಭರಮಪ್ಪ ಜಗಲಾಸರ- ಆಂತರಿಕ ಭದ್ರತಾ ವಿಭಾಗ.