ಬೆಂಗಳೂರು[ಜು. 16]  ವೇತನ ಪರಿಷ್ಕರಣೆ ಹಾಗೂ ಬಡ್ತಿ ತಾರತಮ್ಯ ನಿವಾರಣೆ ಸೇರಿದಂತೆ ಪೊಲೀಸರ ಅನೇಕ ಬೇಡಿಕೆಗಳು ಹಾಗೂ ಸಮಸ್ಯೆಗಳಿಗೆ ಸಂಬಂಧಿಸಿದ್ದ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಜಾರಿ ಮಾಡಲು ರಾಜ್ಯದ ದೋಸ್ತಿ ಸರ್ಕರ ದಿಟ್ಟ ನಿರ್ಧಾರ ಮಾಡಿದೆ.

ಪೊಲೀಸರ ವೇತನ ಪರಿಷ್ಕರಣೆ ಕುರಿತು ನೀಡಲಾಗಿರುವ ವರದಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಅಂಕಿತ ಹಾಕಿದ್ದಾರೆ. ವರದಿಯಲ್ಲಿದ್ದಂತೆ ಶೇ. 30ಕ್ಕೆ ಬದಲಾಗಿ ಶೇ. 12.5 ರಷ್ಟು ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿದೆ. ವರದಿ ಜಾರಿಯಿಂದ ಸರ್ಕಾರದ ಮೇಲೆ 630 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಅಂದಾಜಿಲಸಾಗಿದೆ.

2016 ಜೂನ್ ನಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ವೇತನ ಪರಿಷ್ಕರಣೆ ಸಂಬಂಧ ಬೇಡಿಕೆ ಕೇಳಿಬಂದ ಕಾರಣ  ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ರಚಿಸಿತ್ತು. ಕೇರಳ, ಆಂಧ‍್ರಪ್ರದೇಶ ಹಾಗೂ ಪಶ್ಚಿಮ ಬಂಗಾಳ ಪೊಲೀಸ್ ಇಲಾಖೆಯ ವೇತನ ಆಧರಿಸಿ ರಾಜ್ಯ ಪೊಲೀಸರಿಗೆ ಶೇ.30 ರಷ್ಟು ವೇತನ ಹೆಚ್ಚಿಸುವಂತೆ ಗೃಹ ಸಚಿವರಾಗಿದ್ದ ಡಾ.ಪರಮೇಶ್ವರ್ ಅವರಿಗೆ ಸಮಿತಿ ವರದಿ ಸಲ್ಲಿಕೆ ಮಾಡಿತ್ತು.

ಆದರೆ ಇದಾದ ಮೇಲೆ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ರಾಜಕಾರಣದ ಬದಲಾವಣೆಗಳಾಗಿದ್ದವು. ಎಂ.ಬಿ.ಪಾಟೀಲ್ ಮೈತ್ರಿ ಸರ್ಕಾರದಲ್ಲಿ ಗೃಹಮಂತ್ರಿಯಾದ ಬಳಿಕ ಔರಾದ್ಕರ್ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿದ್ದರು.  ಇದೀಗ ಮೂಲ ವರದಿಯಲ್ಲಿ ಕೆಲ ಮಾರ್ಪಾಡುಗಳೊಂದಿಗೆ ಅಂತಿಮ ಒಪ್ಪಿಗೆ ನೀಡಲಾಗಿದೆ.