ಬೆಂಗಳೂರು (ಆ. 02): ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಪೊಲೀಸ್‌ ಇಲಾಖೆಯಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿನ 11 ಐಪಿಎಸ್‌ ಹುದ್ದೆಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದ್ದು, ಹಿಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಕೆಲವು ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ ಕಲ್ಪಿಸಿದೆ.

ಪ್ರಮುಖವಾಗಿ ಮುಖ್ಯಮಂತ್ರಿಗಳ ಬಳಿ ಇರುವ ಗುಪ್ತಚರ ಇಲಾಖೆ ಮುಖ್ಯಸ್ಥರನ್ನು ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ ಗುಪ್ತಚರ ಇಲಾಖೆ ನೂತನ ಎಡಿಜಿಪಿಯಾಗಿ ಕಮಲ್‌ಪಂತ್‌ ಅವರನ್ನು ನಿಯೋಜಿಸಿದೆ. ಈ ಹುದ್ದೆಯಲ್ಲಿದ್ದ ಐಜಿಪಿ ದಯಾನಂದ ಅವರನ್ನು ಕೆಎಸ್‌ಆರ್‌ಪಿಗೆ ವರ್ಗಾವಣೆಗೊಳಿಸಲಾಗಿದೆ. ರಾಜ್ಯದ ಕಾನೂನು- ಸುವ್ಯವಸ್ಥೆ ಎಡಿಜಿಪಿಯಾಗಿ ಡಾ. ಅಮರ್‌ ಕುಮಾರ್‌ ಪಾಂಡೆ ಅವರನ್ನು ನೇಮಕ ಮಾಡಿದೆ.

ಇನ್ನು ನಿರೀಕ್ಷೆಯಂತೆ ಈ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಬೆಂಗಳೂರು ಅಪರಾಧ ವಿಭಾಗದ (ಸಿಸಿಬಿ) ಜಂಟಿ ಪೊಲೀಸ್‌ ಆಯುಕ್ತ ಬಿ.ಆರ್‌.ರವಿಕಾಂತೇಗೌಡ ಹಾಗೂ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ದೇವರಾಜ್‌ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಅವರಿಬ್ಬರಿಗೂ ಯಾವುದೇ ಹುದ್ದೆ ತೋರಿಸಿಲ್ಲ.

ಮುಖ್ಯಮಂತ್ರಿ ತವರು ಜಿಲ್ಲೆಯ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೂಡ ಬದಲಾಗಿದ್ದು, ಆ ಹುದ್ದೆಗೆ ಗುಪ್ತಚರ ವಿಭಾಗದ ಡಿಸಿಪಿಯಾಗಿದ್ದ ಕೆ.ಎಂ.ಶಾಂತರಾಜು ಅವರನ್ನು ನಿಯುಕ್ತಿಗೊಳಿಸಲಾಗಿದೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ತವರು ಜಿಲ್ಲೆ ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಡಾ.ಅನೂಪ್‌ ಶೆಟ್ಟಿನೇಮಕಗೊಂಡಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆಯಷ್ಟೇ ಭ್ರಷ್ಟಾಚಾರ ನಿಗ್ರಹ ದಳ ಐಜಿಪಿಯಾಗಿ ನೇಮಕಗೊಂಡಿದ್ದ ಹೇಮಂತ್‌ ನಿಂಬಾಳ್ಕರ್‌ ಅವರ ಸ್ಥಳಕ್ಕೆ ಈ ಹಿಂದೆ ಐಜಿಪಿಯಾಗಿದ್ದ ಎಂ.ಚಂದ್ರಶೇಖರ್‌ ಅವರನ್ನೇ ಮತ್ತೆ ನೇಮಿಸಲಾಗಿದೆ. ಆದರೆ, ನಿಂಬಾಳ್ಕರ್‌ ಅವರಿಗೆ ಯಾವುದೇ ಹುದ್ದೆ ನೀಡಿಲ್ಲ.

ಬೆಂಗಳೂರಿನ ಎರಡು ಪ್ರಮುಖ ಹುದ್ದೆಗಳನ್ನು ಬದಲಾವಣೆ ಮಾಡಿರುವ ಸರ್ಕಾರ ಬೆಂಗಳೂರು ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಹುದ್ದೆಗೆ ಮಂಗಳೂರು ಪೊಲೀಸ್‌ ಕಮಿಷನರ್‌ ಆಗಿದ್ದ ಸಂದೀಪ್‌ ಪಾಟೀಲ್‌ ಹಾಗೂ ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿಯನ್ನಾಗಿ ಡಾ.ಚೇತನ್‌ಸಿಂಗ್‌ ರಾಥೋಡ್‌ ಅವನ್ನು ನೇಮಿಸಿದೆ.

ಉಳಿದಂತೆ ಮಂಗಳೂರು ಪೊಲೀಸ್‌ ಕಮಿಷನರ್‌ ಆಗಿ ಡಾ.ಎ.ಸುಬ್ರಮಣ್ಯ ರಾವ್‌, ದಾವಣಗೆರೆ ಎಸ್ಪಿಯಾಗಿ ಹನುಮಂತರಾಯಪ್ಪ ಹಾಗೂ ವಾರ್ತೆ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾಗಿ ಎನ್‌.ಸಿದ್ದರಾಮಪ್ಪ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.