ಕಳೆದ ಹಲವು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಮೇಲಾಟ, ಹೈಡ್ರಾಮಕ್ಕೆ ಅಂತಿಮವಾಗಿ  ತೆರೆ ಬಿದ್ದಿದೆ. ಸಿಎಂ ಕುಮಾರಸ್ವಾಮಿ ದೋಸ್ತಿ ಸರ್ಕಾರ ವಿಶ್ವಾಸ ಕಳೆದುಕೊಂಡಿದೆ.

ಬೆಂಗಳೂರು[ಜು. 23] ನನಗೆ ಯಾವ ನೋವು ಇಲ್ಲ. ನಾನು ವಚನ ಭ್ರಷ್ಟ ಅಲ್ಲ.. ಎಲೆಕ್ಟ್ರಾನಿಕ್ ಮಾಧ್ಯಮಗಳು ದಿಕ್ಕು ತಪ್ಪಿವೆ.. ನೋವಾಗುವಂತಹ ವರದಿಗಳನ್ನು ಕಳೆದ ಒಂದು ವರ್ಷದಿಂದ ಮಾಡಿಕೊಂಡೇ ಬಂದಿವೆ..ಸೋಶಿಯಲ್ ಮೀಡಿಯಾಗಳು ಕುಲಗೆಟ್ಟು ಹೋಗಿವೆ.. ಹೀಗೆ ಹಲವಾರು ವಿಚಾರಗಳನ್ನು ತಮ್ಮ ವಿದಾಯ ಭಾಷಣದಲ್ಲಿ ಕುಮಾರಸ್ವಾಮಿ ಉಲ್ಲೇಖ ಮಾಡಿದರು. 

ವಿಶ್ವಾಸಮತ ಯಾಚನೆಗೆ ಬಿಜೆಪಿ ಪಟ್ಟು ಹಿಡಿದುಕೊಂಡೇ ಬಂದಿತ್ತು. ನಿರಂತರವಾದ ಚರ್ಚೆಗಳು ಕಲಾಪದಲ್ಲಿ ನಡೆಯುತ್ತಲೇ ಇದ್ದವು. ಈ ಮೂಲಕ ಮೇ 23, 2018 ರಂದು ಅಧಿಕಾರ ಆರಂಭಿಸಿದ್ದ ದೋಸ್ತಿ ಸರ್ಕಾರ ಸರಿಯಾಗಿ 14 ತಿಂಗಳಿಗೆ ಅವಸಾನ ಕಂಡಿದೆ.

ಬೆಳಗಾವಿಯ ರಮೇಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಪಿಎಲ್‌ಡಿ ಬ್ಯಾಂಕ್ ವಿಚಾರದಲ್ಲಿ ಹುಟ್ಟಿಕೊಂಡ ಭಿನ್ನಾಭಿಪ್ರಾಯ ಇಡೀ ರಾಜ್ಯದ ರಾಜಕೀಯಕ್ಕೆ ವ್ಯಾಪಿಸಿತು. ದೋಸ್ತಿ ಸರ್ಕಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಮುಂದುವರಿದುಕೊಂಡೇ ಬಂದಿದ್ದವು. ಇದರ ಲಾಭವನ್ನು ವಿಪಕ್ಷ ಬಿಜೆಪಿ ಸಹಜವಾಗಿಯೇ ಪಡೆದುಕೊಂಡಿತು.

ಕುಮಾರಸ್ವಾಮಿ ವಿದಾಯದ ಮಾತು

* ನಮ್ಮ ತಂದೆ ಎಚ್.ಡಿ.ದೇವೇಗೌಡ ಬಗ್ಗೆ ಲಘುವಾಗಿ ಮಾತಾಡಬೇಡಿ 

* ಚುನಾವಣೆಯಲ್ಲಿ ಸೋಲಲಿ, ಗೆಲ್ಲಲಿ ಜನರ ಮಧ್ಯೆ ಬೆಳೆದು ಬಂದವರು ದೇವೇಗೌಡರು

* ಎಚ್‌ಡಿ ರೇವಣ್ಣ ಹೊಳೆಸರಸೀಪುರದಲ್ಲಿ ಜನರ ಮಧ್ಯೆ ಬೆಳೆದು ಬಂದವನು

* ನಾನು ಮಾಡಿದ ತಪ್ಪುಗಳನ್ನು ಕ್ಷಮಿಸಿದ ಪತ್ನಿ ಅನಿತಾ ಇಲ್ಲಿಯೇ ಇದ್ದಾರೆ.

* ನಾನು ರಾಜಕಾರಣಕ್ಕೆ ಬರಬೇಕು ಎಂದೇ ಅಂದುಕೊಂಡಿರಲಿಲ್ಲ.

* ಸಾಲ ಮನ್ನಾ ಮಾಡದೇ ನಾನು ದ್ರೋಹ ಬಗೆದಿಲ್ಲ