ಬೆಂಗಳೂರು (ಆ. 16): ಕರಾವಳಿ ಜಿಲ್ಲೆಗಳಲ್ಲಿ ಬುಧವಾರ ರಾತ್ರಿಯಿಂದೀಚೆಗೆ ಕೆಲಗಂಟೆಗಳ ಕಾಲ ಉತ್ತಮ ಮಳೆ ಸುರಿದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕ ಸೃಷ್ಟಿಸಿದ್ದು ಹೊರತುಪಡಿಸಿದರೆ ಉಳಿದೆಡೆ ಪ್ರವಾಹದ ಆತಂಕ ಬಹುತೇಕ ತಗ್ಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

ಉತ್ತರ ಕರ್ನಾಟಕದಲ್ಲಿ ಪ್ರಮುಖ ನದಿಗಳಾದ ಕೃಷ್ಣಾ, ಮಲಪ್ರಭಾ ನೀರಿನಮಟ್ಟಬಹುತೇಕ ಇಳಿಕೆಯಾಗಿದ್ದು, ಸಂತ್ರಸ್ತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಪ್ರವಾಹದಿಂದ ತತ್ತರಿಸಿದ್ದ ಜನರಲ್ಲಿ ಗುರುವಾರವೂ ಆತಂಕ ಮನೆ ಮಾಡಿತ್ತು. ಇದಕ್ಕೆ ಪೂರಕವಾಗಿ ಬುಧವಾರ ರಾತ್ರಿಯಿಂದೀಚೆಗೆ ದಕ್ಷಿಣ ಕನ್ನಡ ಹೊರತುಪಡಿಸಿ ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲಗಂಟೆಗಳ ಕಾಲ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ಪ್ರವಾಹದ ಭೀತಿ ನಿರ್ಮಾಣವಾಗಿತ್ತು.

ಉತ್ತರ ಕನ್ನಡದಲ್ಲಿ ಸುರಿದ ಮಳೆಗೆ ಕಾರವಾರ ಸಮೀಪದ ಬಿಣಗಾ ಹಾಗೂ ಅರಗಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅರ್ಧ ಕಿಮೀಗೂ ಹೆಚ್ಚಿನ ದೂರ 2ರಿಂದ 3 ಅಡಿ ಎತ್ತರ ನೀರು ನಿಂತಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಬೇಕಾಯಿತು. ಜತೆಗೆ, ಕಾರವಾರದ ವೈದ್ಯಕೀಯ ಕಾಲೇಜಿನ ಆವರಣದಲ್ಲಿರುವ ಜಿಲ್ಲಾ ಆಸ್ಪತ್ರೆಯೊಳಗೆ ನೀರು ನುಗ್ಗಿ ರೋಗಿಗಳು, ಸಿಬ್ಬಂದಿ ಪರದಾಡಬೇಕಾಯಿತು.

ಕೊಡಗು ಮಲೆನಾಡಿನಲ್ಲಿ ಜಿಟಿಜಿಟಿ ಮಳೆ

ಇನ್ನು ಮಲೆನಾಡು ಜಿಲ್ಲೆಗಳಾದ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಮಾತ್ರ ಇಡೀ ದಿನ ಜಿಟಿಜಿಟಿ ಮಳೆಯಾಗಿದ್ದು, ಕೆಲವೆಡೆ ಇಡೀ ದಿನ ಬಿಸಿಲಿನ ದರ್ಶನವಾಗಿದೆ. ಇದರಿಂದ ತುಂಗಾ, ಭದ್ರಾ, ಕಾವೇರಿ, ಲಕ್ಷ್ಮಣ ತೀರ್ಥ, ಹೇಮಾವತಿ ಸೇರಿದಂತೆ ಈ ಭಾಗದ ಪ್ರಮುಖ ನದಿಗಳಲ್ಲಿ ಪ್ರವಾಹ ಮಟ್ಟಬಹುತೇಕ ಇಳಿದಿದೆ. ಕುಸಿದು ಹೋಗಿರುವ ರಸ್ತೆ, ಸೇತುವೆ ಮರು ನಿರ್ಮಾಣ ಕಾರ್ಯ ಬಿರುಸಿನಿಂದ ಸಾಗಿದೆ. ಚಾರ್ಮಾಡಿ ಘಾಟಿಯಲ್ಲೂ ರಸ್ತೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

ಉ.ಕರ್ನಾಟಕದಲ್ಲಿ ನೆರೆ ಇಳಿಕೆ:

ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಈಗ 2.80 ಲಕ್ಷಕ್ಕೆ ಕುಸಿದಿದ್ದು, ನದಿ ತೀರದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಭೀಮಾ ನದಿಯಲ್ಲೂ ಪ್ರವಾಹದ ಮಟ್ಟಇಳಿಕೆಯಾಗಿದ್ದು, ಚಡಚಣ ತಾಲೂಕು ವ್ಯಾಪ್ತಿಯಲ್ಲಿ ಕರ್ನಾಟಕ-ಮಹಾರಾಷ್ಟ್ರ ಸಮಾನಾಂತರ ಗಡಿಯಲ್ಲಿರುವ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಅದೇ ರೀತಿ ಇಂಡಿ ತಾಲೂಕಿನ ವ್ಯಾಪ್ತಿಯ ಕರ್ನಾಟಕ-ಮಹಾರಾಷ್ಟ್ರ ಸಮಾನಾಂತರ ಗಡಿಯಲ್ಲಿ ನಿರ್ಮಿಸಿ ಮೂರು ಸೇತುವೆಗಳಲ್ಲಿ ವಾಹನಗಳ ಓಡಾಟ ಆರಂಭವಾಗಿದೆ. ನಾರಾಯಣಪುರ ಜಲಾಶಯದಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಕ್ಯುಸೆಕ್‌ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಯಾದಗಿರಿ, ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ಮಾತ್ರ ಇನ್ನೂ ಆತಂಕ ತಗ್ಗಿಲ್ಲ. ತುಂಗಭದ್ರಾ ಡ್ಯಾಂನಿಂದಲೂ ಹೊರಬಿಡುವ ನೀರಿನ ಪ್ರಮಾಣ ತಗ್ಗಿದ್ದು, ರಾಯಚೂರು, ಬಳ್ಳಾರಿ, ಕೊಪ್ಪಳದಲ್ಲಿ ನದಿ ನೀರಿನ ಮಟ್ಟಇಳಿಕೆಯಾಗಿದೆ.