ತೀರ್ಥಹಳ್ಳಿಯಲ್ಲಿ ದೊಡ್ಡ ಗುಡ್ಡ ಕುಸಿತ, ನೂರಾರು ಎಕರೆ ಕೃಷಿ ಭೂಮಿ ನಾಶ!
ಮಲೆನಾಡಲ್ಲಿ ಭೂಕುಸಿತ ಭೀತಿ ಹೆಚ್ಚಳ| ತೀರ್ಥಹಳ್ಳಿಯಲ್ಲಿ ದೊಡ್ಡ ಗುಡ್ಡ ಕುಸಿತ| ನೂರಾರು ಎಕರೆ ಕೃಷಿ ಭೂಮಿ ನಾಶ
ಬೆಂಗಳೂರು[ಆ.12]: ಕಳೆದ ಒಂದು ವಾರದಿಂದ ಮಳೆನಾಡು ಭಾಗದಲ್ಲಿಯೂ ಭಾರೀ ಮಳೆಯಾಗುತ್ತಿರುವ ಪರಿಣಾಮ ಕೊಡಗು, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧೆಡೆ ಭೂಕುಸಿತವಾಗಿದ್ದು, ಆತಂಕ ಮತ್ತಷ್ಟುಹೆಚ್ಚಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಭೂಕುಸಿತವಾಗಿದ್ದು, ನೂರಾರು ಎಕರೆ ಕಾಫಿ ತೋಟ ನಾಶವಾಗಿದೆ. ಅಲ್ಲಲ್ಲಿ ರಸ್ತೆಗೆ ಧರೆ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತವಾಗಿ ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿತ್ತು. ಸಾವಿರಾರು ಎಕರೆ ಕಾಪಿ ತೋಟ ಸೇರಿದಂತೆ ಬೆಳೆನಾಶವಾಗಿತ್ತು. ಹೀಗಾಗಿ ಸಣ್ಣಪ್ರಮಾಣದಲ್ಲಿ ಆದ ಭೂಕುಸಿತ ಭಾರೀ ಆತಂಕವನ್ನು ಸೃಷಿಸಿದೆ.
ವರುಣನ ಅಬ್ಬರಕ್ಕೆ ಕರುನಾಡು ತತ್ತರ: ಮಳೆಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳಿಗಾಗಿ ಕ್ಲಿಕ್ಕಿಸಿ
ದೊಡ್ಡ ಗುಡ್ಡ ಕುಸಿತ:
ಶನಿವಾರ ರಾತ್ರಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಹೋಬಳಿಯ ಹೆಗಲತ್ತಿ-ಕೂಡಿಗಲ್ ಗ್ರಾಮದಲ್ಲಿ ನೂರಾರು ಎಕರೆ ಕೃಷಿ ಭೂಮಿಯ ಮೇಲೆ ಗುಡ್ಡ ಕುಸಿದಿದೆ. ಈ ಜಾಗದಲ್ಲಿ ಕೃಷಿ ಭೂಮಿ ಇತ್ತು ಎಂದು ಗೊತ್ತಾಗುವಂತೆಯೇ ಇಲ್ಲವಾಗಿದೆ. ಕೃಷಿ ಭೂಮಿ ಸಂಪೂರ್ಣ ನಿರ್ನಾಮವಾಗಿದೆ.
ಶನಿವಾರ ರಾತ್ರಿ ಈ ಘಟನೆ ನಡೆದಿದ್ದು, ಭಾರೀ ಸದ್ದಿನೊಂದಿಗೆ ಗುಡ್ಡ ಸಂಪೂರ್ಣ ಜಾರಿ ಕೆಳ ಭಾಗದಲ್ಲಿದ್ದ ಅಡಕೆ, ಭತ್ತದ ಗದ್ದೆಯ ಮೇಲೆ ಬಿದ್ದಿದೆ. ಮಣ್ಣಿನ ಜೊತೆ ಭಾರೀ ಪ್ರಮಾಣದಲ್ಲಿ ನೀರು ಕೂಡ ಹರಿದುಬಂದಿದ್ದು, ಈ ಕೆಸರು ಮಣ್ಣಿನಲ್ಲಿ ಸಾಗುವಾನಿ, ಬೀಟೆ ಸೇರಿದಂತೆ ಭಾರೀ ಗಾತ್ರದ ಮರಗಳೂ ಉರುಳಿ ಬಂದಿವೆ. ಆದರೆ, ಅದೃಷ್ಟವಶಾತ್ ಈ ಭಾಗದಲ್ಲಿ ಯಾವುದೇ ಮನೆ ಇರದ ಕಾರಣ ಜೀವ ಹಾನಿಯಾಗಿಲ್ಲ. ಗುಡ್ಡ ಕುಸಿದ ರಭಸಕ್ಕೆ ಅಡಕೆ, ತೆಂಗಿನ ಮರಗಳು ಬುಡ ಸಹಿತ ನೂರಾರು ಮೀಟರ್‌ಗಳಷ್ಟುಕೊಚ್ಚಿಕೊಂಡು ಮುಂದಕ್ಕೆ ಹೋಗಿದೆ.
ಭಾನುವಾರ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಪಂನ ಭಾನ್ಕುಳಿಯಲ್ಲಿ ಭೂಮಿ ಬಿರುಕು ಬಿಟ್ಟು ಮೂರು ಕುಟುಂಬಗಳು ಆತಂಕದಲ್ಲಿವೆ. ನೂರು ಮೀಟರಗೂ ಹೆಚ್ಚು ಉದ್ದ ಹಾಗೂ ಎಂಟರಿಂದ ಹತ್ತು ಅಡಿಗಳಷ್ಟಆಳದ ಎರಡಮೂರು ಅಡಿ ಅಗಲದ ಬಿರುಕು ಕಾಣಿಸಿಕೊಂಡಿವೆ.