ಬೆಂಗಳೂರು : ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಿಂದ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದರೂ ಉತ್ತರ ಒಳನಾಡಿನ ಬಹುತೇಕ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳು ಸೇರಿದಂತೆ ಒಟ್ಟು 17 ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಭಾವದಿಂದ ಬರದ ಛಾಯೆ ಆವರಿಸಿದೆ. 

ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಿಂದಾಗಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳೂ ಭರ್ತಿಯಾಗಿವೆ. ಆದರೆ, ಉತ್ತರ ಒಳನಾಡಿನಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬೆಳೆಗಳು  ಒಣಗಲಾರಂಭಿಸಿವೆ. ಜೂ.೧ರಿಂದ ಆ. 4ರವರೆಗಿನ ಅಂಕಿ ಅಂಶಗಳ ಪ್ರಕಾರ, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಸರಾಸರಿಗಿಂತ ಹೆಚ್ಚು ಮಳೆಯಾಗಿರುವುದನ್ನು ಗಣನೆಗೆ ತೆಗೆದುಕೊಂಡರೆ ರಾಜ್ಯದ ಒಟ್ಟಾರೆ  ಮಳೆ ಪ್ರಮಾಣದಲ್ಲಿ ಕೇವಲ ಶೇ. 2 ರಷ್ಟು ಕೊರತೆ ಕಂಡುಬರುತ್ತದೆ. 

ಆದರೆ, ಒಳನಾಡಿನ ಜಿಲ್ಲೆಗಳ ಮಳೆ ಪ್ರಮಾಣವನ್ನು ಪ್ರತ್ಯೇಕವಾಗಿ ಅವಲೋಕಿಸಿದಾಗ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಕೊರತೆ ಉಂಟಾಗಿರುವುದು ಕಂಡುಬಂದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ, ಉತ್ತರ ಒಳನಾಡಿನ ಎಲ್ಲ 11 ಜಿಲ್ಲೆಗಳಲ್ಲೂ ಮಳೆಯ  ಕೊರತೆ ಉಂಟಾಗಿದೆ. ಅದರಲ್ಲೂ ರಾಯಚೂರು, ವಿಜಯಪುರ, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಭಾರೀ ಮಳೆಯ ಕೊರತೆ ಉಂಟಾಗಿದ್ದು, ಬರದ ಆತಂಕ ಎದುರಾಗಿದೆ. 

ಇನ್ನು ದಕ್ಷಿಣ ಒಳನಾಡಿನ 12 ಜಿಲ್ಲೆಗಳ ಪೈಕಿ ಬಯಲು ಸೀಮೆಯ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ದಾವಣಗೆರೆ ಸೇರಿದಂತೆ ಆರು ಜಿಲ್ಲೆಗಳಲ್ಲಿ ಮಳೆಯ ಕೊರತೆಯಾಗಿದೆ. ಜೂನ್ ತಿಂಗಳಲ್ಲಿ ಒಳನಾಡಿನಲ್ಲೂ ತಕ್ಕಮಟ್ಟಿನ ಮಳೆಯಾಯಿತಾದರೂ, ಜುಲೈ ತಿಂಗಳಲ್ಲಿ ಸಂಪೂರ್ಣ ಕೈಕೊಟ್ಟಿತು. ಇನ್ನು ಆಗಸ್ಟ್ ತಿಂಗಳಲ್ಲೂ ಇದೇ ಸ್ಥಿತಿ ಮುಂದುವರೆದಿದ್ದು, ಮುಂದಿನ ಒಂದು ವಾರದ ಕಾಲ ಯಾವುದೇ ಉತ್ತಮ ಮಳೆಯಾಗುವ ನಿರೀಕ್ಷೆಗಳಿಲ್ಲ. ಆದರೆ, ಕರಾವಳಿ ಮತ್ತು ಮಲೆನಾಡು ಭಾಗದ ಏಳು ಜಿಲ್ಲೆಗಳಲ್ಲಿ ಈ ವರೆಗೆ ಮಳೆಯ ಕೊರತೆ ಉಂಟಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಒಣಗುತ್ತಿವೆ ಬೆಳೆ: ಪೂರ್ವ ಮುಂಗಾರು ಮತ್ತು ಮುಂಗಾರು ಆರಂಭಿಕ ಅವಧಿಯಲ್ಲಿ ರಾಜ್ಯಾದ್ಯಂತ ಬಿದ್ದ ಉತ್ತಮ ಮಳೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಎದುರಿಸು ತ್ತಿದ್ದ ಬರ ಪರಿಸ್ಥಿತಿ ಈ ಬಾರಿ ಕೊನೆಯಾಗಬಹುದು ಎಂಬ ಆಶಾಭಾವನೆ ತರಿಸಿತ್ತು. ಆದರೆ, ಒಳನಾಡಿನ ರೈತರಲ್ಲಿ ಹಿಂದೆ ಇದ್ದ ಮಂದಹಾಸ ಈಗ ಉಳಿದಿಲ್ಲ. ಒಳನಾಡಿನ ಹಲವು ಜಿಲ್ಲೆಗಳಲ್ಲಿ ಜೂನ್ ಮಧ್ಯಭಾಗದಿಂದ ಸರಾಸರಿಯಷ್ಟೂ ಮಳೆಯಾಗಿಲ್ಲ.

ಜುಲೈ ಮೊದಲ ವಾರ ಕೆಲವೆಡೆ ಮಾತ್ರ ಮಳೆಯಾಗಿದೆ.  ಉಳಿದೆಡೆ ಮಳೆ ಕೈಕೊಟ್ಟಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣದ ಅರ್ಧದಷ್ಟೂ ಮಳೆಯಾಗಿಲ್ಲ. ಇದು ಆ ಭಾಗದ ರೈತರು ಕಂಗಾಲಾಗುವಂತೆ ಮಾಡಿದೆ. ಕಳೆದ ಒಂದು ತಿಂಗಳಿಂದ ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬರೀ ಮೋಡ ಮುಸುಕಿದ ವಾತಾವರಣ ಬಿಟ್ಟರೆ ಉತ್ತಮ ಮಳೆಯಾಗಿರುವುದು ಬಹುತೇಕ ಕಡಿಮೆ. ಇದರಿಂದ ಈ ಜಿಲ್ಲೆಗಳಲ್ಲಿ ಬಿತ್ತನೆಯಾಗಿರುವ ರಾಗಿ,  ತೊಗರಿ, ಮೆಕ್ಕೆಜೋಳ, ಮೆಣಸಿನ ಕಾಯಿ, ಉದ್ದು, ಹೆಸರು ಮತ್ತಿತರ ಬೆಳೆಗಳು ನೀರಿನ ಅಭಾವಕ್ಕೆ ತುತ್ತಾಗಿದ್ದು, ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಬೆಳೆ ನೆಲ ಕಚ್ಚುತ್ತಿವೆ. ರೈತರು ಬೆಳೆ ಒಣಗುವ ಆತಂಕ ಎದುರಿಸುತ್ತಿದ್ದಾರೆ. ಇನ್ನು ಮುಂಗಾರು ಆರಂಭದಲ್ಲಿ ಉತ್ತಮ ಮಳೆಯಾಗಿದ್ದರಿಂದ ಬೋರ್‌ವೆಲ್ ನೀರು ನೆಚ್ಚಿಕೊಂಡು ಭತ್ತದ ನಾಟಿಗೆ ಕಾಯುತ್ತಿರುವ ಬಯಲುಸೀಮೆಯ ರೈತರು ಮಳೆ ಬರುತ್ತದೋ ಇಲ್ಲವೋ, ಪೈರು ನಾಟಿ ಮಾಡುವುದೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. 

ಜಲಾಶಯ ಭರ್ತಿ-ಕೆರೆಗಳಿಗೆ ನೀರಿಲ್ಲ: ರಾಜ್ಯದ ಬಹುತೇಕ ಜಲಾಶಯಗಳು ಅವಧಿಗೂ ಮೊದಲೇ ಭರ್ತಿಯಾಗಿ ಸಾಕಷ್ಟು ಪ್ರಮಾಣದ ನೀರನ್ನು ಸಮುದ್ರಕ್ಕೆ ಹರಿಬಿಡಲಾಗುತ್ತಿದೆ. ಆದರೂ, ಜಲಾಶ ಯಗಳಿಂದ ಕೆರೆಗಳಿಗೆ ನೀರು ಹರಿಸುವ ಕೆಲಸ ಸಮರ್ಪಕವಾಗಿ ಆಗುತ್ತಿಲ್ಲ. ತುಮಕೂರು ಜಿಲ್ಲೆಯ ಗುಬ್ಬಿ, ಶಿರಾ ಮತ್ತಿತರ ತಾಲ್ಲೂಕುಗಳಲ್ಲಿ ರೈತರು ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆ ಸುತ್ತಿದ್ದಾರೆ. ಆಲಮಟ್ಟಿ ಜಲಾಶಯದಿಂದ ಕೃಷ್ಣಾ ಕಾಲುವೆಗಳಿಗೆ ನೀರು ಹರಿಸುವಂತೆ ಇತ್ತಿಚೆಗೆ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ ಬಳಿಕ ಕೆಆರ್‌ಎಸ್ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. 

ಇನ್ನು ಹೇಮಾವತಿ ಸೇರಿದಂತೆ ಕೆಲ ಜಲಾಶಯಗಳಿಂದ ಕೆರೆಗಳಿಗೆ ಕೆಲ ದಿನಗಳಿಂದ ಈಚೆಗೆ ನೀರು ಹರಿಸಲಾಗುತ್ತಿದೆ. ಆದರೆ, ಈ ಕಾರ್ಯವನ್ನು ಜಲಾಶಯಗಳು ಭರ್ತಿಯಾದ ಕೂಡಲೇ ಆರಂಭಿಸಿದ್ದರೆ ಇಷ್ಟೊತ್ತಿಗೆ ಕಾಲುವೆಗಳ ಸಂಪರ್ಕ ಇರುವ ಎಲ್ಲ ಕೆರೆಗಳೂ ಭರ್ತಿಯಾಗಿರುತ್ತಿದ್ದವು. ಇದರಿಂದ ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ರೈತ ಮುಖಂಡರು.