ಬೆಂಗಳೂರು :  ಬ್ಯಾಂಕಿಂಗ್‌ ನೇಮಕಾತಿಗೆ ನಡೆಸುವ ಐಬಿಪಿಎಸ್‌ ಪರೀಕ್ಷೆಗಳಲ್ಲಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ರಾಜ್ಯದ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಪತ್ರ ಬರೆದಿದ್ದಾರೆ.

ಬ್ಯಾಂಕಿಂಗ್‌ ನೇಮಕಾತಿಗೆ ನಡೆಸುವ ಇನ್‌ಸ್ಟಿಟ್ಯೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ಗೆ (ಐಬಿಪಿಎಸ್‌) ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸೇರಿದಂತೆ ಹಲವರು ಕೇಂದ್ರಕ್ಕೆ ಪತ್ರ ಬರೆದಿದ್ದರು. ಆದರೂ, ರಾಜ್ಯ ಸರ್ಕಾರದ ಮನವಿಯನ್ನು ತಾವು ಪುರಸ್ಕರಿಸಿಲ್ಲ. ಪ್ರಾದೇಶಿಕ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಹಲವು ರಾಜ್ಯಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಸ್ಥಳೀಯ ಭಾಷೆಗೆ ಅವಕಾಶ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಕೇವಲ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ಬರೆಯಬಹುದು ಎಂದು ಹೇಳಲಾಗಿದೆ. ಇದರಿಂದ ಉತ್ತರ ಭಾರತದವರು ದಕ್ಷಿಣ ಭಾರತದ ಅಭ್ಯರ್ಥಿಗಳ ಅವಕಾಶ ಕಸಿದುಕೊಂಡಂತಾಗಿದೆ. ಹೀಗಾಗಿ ಸಮಯ ಮಿತಿ ಹಾಕಿಕೊಂಡು ರಾಜ್ಯ ಸರ್ಕಾರದ ಮನವಿಯನ್ನು ಈಡೇರಿಸಬೇಕು. ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.