ಆಸ್ಪತ್ರೆ ಮೇಲ್ದರ್ಜೆಗೇರಿಸಿ, ಸೇತುವೆ ಕಾಮಗಾರಿ ಪೂರ್ಣಗೊಳಿಸಿಕೊಡುವುದಾಗಿ ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನು ಅವರಿಗೆ ನೆನಪಿಸುವ ಸಲುವಾಗಿ ಒಡಿಶಾದ 30 ವರ್ಷದ ವ್ಯಕ್ತಿಯೊಬ್ಬ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದಾನೆ. ಈಗಾಗಲೇ 1350 ಕಿ.ಮೀ. ಕ್ರಮಿಸಿ, ಉತ್ತರಪ್ರದೇಶದ ಆಗ್ರಾ ತಲುಪಿರುವ ಆತನ ಬೆಂಬಲಕ್ಕೆ ಈಗ ಕಾಂಗ್ರೆಸ್ ಧಾವಿಸಿದೆ.
ನವದೆಹಲಿ/ಆಗ್ರಾ (ಜೂ. 26): ಆಸ್ಪತ್ರೆ ಮೇಲ್ದರ್ಜೆಗೇರಿಸಿ, ಸೇತುವೆ ಕಾಮಗಾರಿ ಪೂರ್ಣಗೊಳಿಸಿಕೊಡುವುದಾಗಿ ಮೂರು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಭರವಸೆಯನ್ನು ಅವರಿಗೆ ನೆನಪಿಸುವ ಸಲುವಾಗಿ ಒಡಿಶಾದ 30 ವರ್ಷದ ವ್ಯಕ್ತಿಯೊಬ್ಬ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದಾನೆ. ಈಗಾಗಲೇ 1350 ಕಿ.ಮೀ. ಕ್ರಮಿಸಿ, ಉತ್ತರಪ್ರದೇಶದ ಆಗ್ರಾ ತಲುಪಿರುವ ಆತನ ಬೆಂಬಲಕ್ಕೆ ಈಗ ಕಾಂಗ್ರೆಸ್ ಧಾವಿಸಿದೆ.
ರೂರ್ಕೆಲಾದ ಆಸ್ಪತ್ರೆ ಮೇಲ್ದರ್ಜೆಗೇರಿಸಿಕೊಡುವುದಕ್ಕೆ ನೆರವಾಗಲು ಕಾಂಗ್ರೆಸ್ ವತಿಯಿಂದ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. 20 ಲಕ್ಷ ರು. ಸಂಗ್ರಹಿಸುವ ಗುರಿಯೊಂದಿಗೆ ಮೂರು ದಿನಗಳ ಹಿಂದೆ ಆರಂಭವಾಗಿರುವ ಈ ಅಭಿಯಾನದಲ್ಲಿ ಈಗಾಗಲೇ 5.25 ಲಕ್ಷ ರು. ಸಂಗ್ರಹವಾಗಿದೆ. ಕರ್ನಾಟಕದ ಸಚಿವ ಕೃಷ್ಣ ಬೈರೇಗೌಡ ಹಾಗೂ ಸಂಸದ ರಾಜೀವ್ ಗೌಡ ಅವರು ತಲಾ 10 ಸಾವಿರ ರು. ದೇಣಿಗೆ ನೀಡಿದ್ದಾರೆ.
ಮುಕ್ತಿಕಾಂತ್‌ಗೆ ಸಹಾಯ ನೀಡುವ ಅಭಿಯಾನದಲ್ಲಿ ಕೈಜೋಡಿಸುವಂತೆ ಉಪಮುಖ್ಯಮಂತ್ರಿ ಡಾ ಜಿ. ಪರಮೇಶ್ವರ, ಸಚಿವರಾದ ಆರ್.ವಿ. ದೇಶಪಾಂಡೆ, ಯು.ಟಿ. ಖಾದರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರಿಗೂ ಟ್ವೀಟರ್‌ನಲ್ಲಿ ಕೃಷ್ಣ ಬೈರೇಗೌಡ ಮನವಿ ಮಾಡಿದ್ದಾರೆ. ಈವರೆಗೆ ಅತಿ ಹೆಚ್ಚು ದೇಣಿಗೆ ನೀಡಿದವರಲ್ಲಿ ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧಿಯಾ ಇದ್ದು, 50 ಸಾವಿರ ರು. ಕೊಡುಗೆ ಕೊಟ್ಟಿದ್ದಾರೆ.
ಸುದೀರ್ಘ ಪಾದಯಾತ್ರೆ:
2015ರ ಏ.1 ರಂದು ಒಡಿಶಾದ ರೂರ್ಕೆಲಾಗೆ ಭೇಟಿ ನೀಡಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ ಅವರು, ಅಲ್ಲಿನ ಇಸ್ಪಾತ್ ಜನರಲ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಘೋಷಿಸಿದ್ದರು. ಅಲ್ಲದೆ ಬ್ರಾಹ್ಮಣಿ ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಇಷ್ಟುವರ್ಷಗಳು ಕಳೆದರೂ ಇಲ್ಲಿವರೆಗೂ ಏನೂ ಆಗಿಲ್ಲ ಎಂಬುದು ಜನರ ದೂರು.
ಇದನ್ನು ಪ್ರಧಾನಿ ಮೋದಿ ಅವರಿಗೆ ಮುಟ್ಟಿಸುವ ಸಲುವಾಗಿ ಮೂರ್ತಿ ತಯಾರಕ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ, ಒಡಿಶಾದ ರೂರ್ಕೆಲಾದ ಮುಕ್ತಿಕಾಂತ್ ಎಂಬಾತ ರಾಷ್ಟ್ರ ಧ್ವಜ ಹಿಡಿದು ದೆಹಲಿಗೆ ಪಾದಯಾತ್ರೆ ಹೊರಟಿದ್ದಾನೆ. ಇಸ್ಪಾತ್ ಆಸ್ಪತ್ರೆ ರೂರ್ಕೆಲಾದಲ್ಲಿನ ಜನರಿಗೆ ಜೀವನಾಡಿ ಇದ್ದಂತೆ. ಆದರೆ ಅದು ತೀರಾ ಕೆಟ್ಟಪರಿಸ್ಥಿತಿಯಲ್ಲಿದೆ. ಪ್ರತಿ ದಿನವೂ ಜನರು ಸಾಯುತ್ತಿದ್ದಾರೆ. ಹೀಗಾಗಿ ಈ ವರ್ಷದಲ್ಲಾದರೂ ಮೋದಿ ಅವರು ಭರವಸೆ ಈಡೇರಿಸಲಿ ಎಂದು ಕೋರುವ ಸಲುವಾಗಿ ಯಾತ್ರೆ ಕೈಗೊಂಡಿದ್ದಾಗಿ ತಿಳಿಸಿದ್ದಾನೆ.
ಯಾತ್ರೆ ಸಂದರ್ಭದಲ್ಲಿ ಆಯಾಸಗೊಂಡಿದ್ದ ಅವರು, ಆಗ್ರಾದಲ್ಲಿ ಕುಸಿದುಬಿದ್ದಿದ್ದರು. ಅವರನ್ನು ಆಸ್ಪತ್ರೆಗೂ ಸೇರಿಸಲಾಗಿತ್ತು. ಆದಾಗ್ಯೂ ಯಾತ್ರೆ ಮೊಟಕುಗೊಳಿಸಲು ಅವರು ಒಪ್ಪುತ್ತಿಲ್ಲ.
ಕಾಂಗ್ರೆಸ್ ಅಭಿಯಾನ:
ಮೋದಿ ಅವರು ಮುಕ್ತಿಕಾಂತ್‌ಗೂ ಬೊಗಳೆ ಮಾತು ಆಡಬಹುದು. ಮತ್ತೊಂದು ಭರವಸೆ ಕೊಡಬಹುದು. ಹೀಗಾಗಿ ಮುಕ್ತಿಕಾಂತ್ ಊರಿನ ಜನರಿಗೆ ನೆರವಾಗಲು ಎಲ್ಲರೂ ಕೈಜೋಡಿಸೋಣ ಎಂದು ದೇಣಿಗೆ ಸಂಗ್ರಹ ಅಭಿಯಾನವನ್ನು ಕಾಂಗ್ರೆಸ್ ಆರಂಭಿಸಿದೆ.
