Asianet Suvarna News Asianet Suvarna News

ಅಧಿಕಾರ ಬಿಟ್ಟು ವಿಪಕ್ಷ ಆಗಲು ಕಾಂಗ್ರೆಸ್ ಸಜ್ಜು ?

ಕರ್ನಾಟಕ ರಾಜಕೀಯ ಪ್ರಹಸನ ನಡುವೆ ಸುಪ್ರೀಂ ಮಹತ್ವದ ತೀರ್ಪು ಪ್ರಕಟಿಸುತ್ತಿದೆ. ಹಲವಾರು ಶಾಸಕರು ಅತೃಪ್ತರಾಗಿ ಹೊರ ನಡೆದಿದ್ದಾರೆ. ಇದೇ ವೇಳೆ ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಜ್ಜಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. 

Karnataka Congress Ready To Sit in opposition Party
Author
Bengaluru, First Published Jul 16, 2019, 8:05 AM IST

ಬೆಂಗಳೂರು [ಜು.16] :  ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಮೂಲಕ ಅತೃಪ್ತ ಶಾಸಕರೊಂದಿಗೆ ಸಂಧಾನ ನಡೆಸುವ ಕಟ್ಟಕಡೆಯ ಆಸೆಯೂ ಹುಸಿಯಾದ ಪರಿಣಾಮ ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನಗಳು ಕಾಂಗ್ರೆಸ್‌ನಲ್ಲಿ ಬಹುತೇಕ ಸ್ತಬ್ಧವಾಗಿದೆ. ಜತೆಗೆ, ನಿಕಟ ಭವಿಷ್ಯದಲ್ಲಿ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್‌ ಪಾಳೆಯ ಮಾನಸಿಕವಾಗಿ ಸಜ್ಜಾದ ಲಕ್ಷಣಗಳು ಗೋಚರಿಸತೊಡಗಿವೆ.

ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್‌ ಮನವೊಲಿಸುವ ಹೈಡ್ರಾಮಾ ನಾಟಕೀಯವಾಗಿ ವಿಫಲವಾದ ನಂತರ ರಾಮಲಿಂಗಾರೆಡ್ಡಿ ಅವರು ಆಶಾಕಿರಣವಾಗಿ ಕಂಡು ಬಂದಿದ್ದರು. ಆದರೆ, ರಾಮಲಿಂಗಾರೆಡ್ಡಿ ಅವರು ಇದ್ದಲ್ಲಿಗೆ ಪಕ್ಷದ ಘಟಾನುಘಟಿ ನಾಯಕರು ತೆರಳಿ ನಡೆಸಿದ ಮನವೊಲಿಕೆ ಪ್ರಯತ್ನ ಫಲಕೊಡದ ಹಿನ್ನೆಲೆಯಲ್ಲಿ ಸೋಮವಾರ ನಾಯಕರು ತಟಸ್ಥರಾಗಿ ಉಳಿದರು.

ಅತೃಪ್ತರ ಮನವೊಲಿಕೆಗೆ ರಾಮಲಿಂಗಾರೆಡ್ಡಿ ಹಿಂಜರಿದ ಕಾರಣ ಈ ದಿಸೆಯಲ್ಲಿ ಪ್ರಯತ್ನ ಮುಂದುವರೆಸಲು ಬೆಂಗಳೂರಿಗೆ ಸೋಮವಾರ ಆಗಮಿಸಬೇಕಿದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಹಾಗೂ ಹೈಕಮಾಂಡ್‌ನ ಹಿರಿಯ ನಾಯಕ ಗುಲಾಂ ನಬಿ ಅಜಾದ್‌ ಕೂಡ ತಮ್ಮ ಪ್ರವಾಸ ರದ್ದುಗೊಳಿಸಿದರು. ಅಲ್ಲದೆ, ಅತೃಪ್ತರ ಪ್ರಹಸನ ಆರಂಭಗೊಂಡ ನಂತರ ತೀವ್ರ ಕ್ರಿಯಾಶೀಲವಾಗಿದ್ದ ಸಚಿವ ಡಿ.ಕೆ.ಶಿವಕುಮಾರ್‌ ಸಹ ಸೋಮವಾರ ಈ ದಿಸೆಯಲ್ಲಿ ಯಾವುದೇ ಮಹತ್ವದ ಚಟುವಟಿಕೆ ನಡೆಸಲಿಲ್ಲ.

ಉಳಿದಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರೆ ಹಿರಿಯ ನಾಯಕರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ, ವಿಧಾನಮಂಡಲದ ಅಧಿವೇಶನಗಳಲ್ಲಿ ಪಾಲ್ಗೊಂಡರು. ಸೋಮವಾರ ಸಂಜೆ ಹಿರಿಯ ನಾಯಕರು ಸಭೆ ನಡೆಸಿದರಾದರೂ, ಈ ಸಭೆಯಲ್ಲಿ ಅತೃಪ್ತರ ಮನವೊಲಿಸುವ ದಿಸೆಯಲ್ಲಿ ಪ್ರಯತ್ನ ನಡೆಸುವ ಬಗ್ಗೆ ಚರ್ಚೆಗಿಂತ ಪಕ್ಷದ ಇತರ ಶಾಸಕರನ್ನು ಒಗ್ಗಟ್ಟಾಗಿ ಉಳಿಸಿಕೊಳ್ಳುವ ಬಗ್ಗೆಯೇ ಹೆಚ್ಚಿನ ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಪ್ರತಿಪಕ್ಷದಲ್ಲಿ ಕೂರೋಣ-ಶಾಸಕರು:

ಈ ನಡುವೆ ಸೋಮವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಅತೃಪ್ತ ಶಾಸಕರ ಮನವೊಲಿಕೆ ಪ್ರಯತ್ನ ನಿಲ್ಲಿಸಿ, ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವ ದಿಸೆಯಲ್ಲಿ ಕಾಂಗ್ರೆಸ್‌ ಕಾರ್ಯ ಪ್ರವೃತ್ತವಾಗಬೇಕು ಎಂದು ಹಿರಿಯ ಶಾಸಕರು ನೇರವಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸರ್ಕಾರ ಉಳಿಸಿಕೊಳ್ಳಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಪಕ್ಷಕ್ಕೆ ವಾಪಸಾಗದ ಸದಸ್ಯರನ್ನು ಅನರ್ಹತೆಗೆ ಗುರಿಪಡಿಸುವ ಮೂಲಕ ಕ್ರಮ ಕೈಗೊಳ್ಳಲಿದ್ದೇವೆ. ನೀವು ಯಾವುದೇ ಕಾರಣಕ್ಕೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗದೆ ಮುಖ್ಯಮಂತ್ರಿಗಳು ಮಂಡಿಸಲಿರುವ ವಿಶ್ವಾಸಮತ ಯಾಚನೆ ನಿರ್ಣಯದ ಪರವಾಗಿ ಮತ ಹಾಕಬೇಕು ಎಂದು ಕೋರಿದರು ಎನ್ನಲಾಗಿದೆ.

ಈ ವೇಳೆ ಕೆಲ ಹಿರಿಯ ಸದಸ್ಯರು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದರು. ಅತೃಪ್ತರ ಮನವೊಲಿಸಲು ನಡೆಸುತ್ತಿರುವ ಹೈಡ್ರಾಮಗಳ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳುವ ಗೋಜಿಗೆ ಹೋಗುವುದು ಬೇಡ. ವಿರೋಧಪಕ್ಷವಾಗಿಯೇ ಕೆಲಸ ಮಾಡೋಣ, ಇಲ್ಲದಿದ್ದರೆ ಸದ್ಯದಲ್ಲೇ ಬರಬಹುದಾದ ಉಪ ಚುನಾವಣೆಗಳಿಗೆ ಸಜ್ಜಾಗೋಣ ಎಂದು ಸಲಹೆ ನೀಡಿದರು ಎನ್ನಲಾಗಿದೆ.

ಮೈತ್ರಿ ರಾಜಕಾರಣ ಸಾಕು. ಸಮ್ಮಿಶ್ರ ಸರ್ಕಾರದಿಂದ ಪಕ್ಷ ಸಾಕಷ್ಟುಕಳೆದುಕೊಂಡಿದೆ. ಹಲವು ಜಿಲ್ಲೆಗಳಲ್ಲಿ ಪಕ್ಷ ಶಕ್ತಿ ಕಳೆದುಕೊಂಡಿದೆ. ಶಾಸಕರ ಮನವೊಲಿಸುವ ರಾಜಕೀಯ ಹೈಡ್ರಾಮ ಬಿಟ್ಟುಬಿಡಿ. ಅತೃಪ್ತರು ಪಕ್ಷ ಬಿಟ್ಟಿರುವುದರಿಂದ ಎದುರಾಗಬಹುದಾದ ಉಪ ಚುನಾವಣೆಗೆ ಸಜ್ಜಾಗಿ, ಆ ಮೂಲಕ ಅತೃಪ್ತರಿಗೆ ಪಾಠ ಕಲಿಸುವುದೇ ಉತ್ತಮ ದಾರಿ ಎಂದು ಶಾಸಕರು ಅಭಿಪ್ರಾಯ ಮಂಡಿಸಿದರು ಎನ್ನಲಾಗಿದೆ.

Follow Us:
Download App:
  • android
  • ios