ಬೆಂಗಳೂರು[ಜು.31]  ಕಾಂಗ್ರೆಸ್ ಅನ್ನ ಪುಟ್ಬಾಲ್ ರೀತಿ ಆಡಿಸ್ತಿದೆಯಾ ಜೆಡಿಎಸ್ ಎನ್ನುವ ಪ್ರಶ್ನೆ ಕಾಂಗ್ರೆಸ್ ನಾಯಕರಲ್ಲೆ ಮೂಡಿದೆ.  ಜೆಡಿಎಸ್ ಆಡಳಿತದ ಆಟಗಳನ್ನ ನೋಡಿ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಪಕ್ಷ ಪುಟ್ಬಾಲ್ ಆಗಿದೆ ಎಂದು ಪಿಸುಗುಡುತ್ತಿದ್ದಾರೆ. ಇನ್ನೊಂದು ಕಡೆ ದೇವೇಗೌಡರ ಕುಟುಂಬ ಕಾಂಗ್ರೆಸ್ ಎಷ್ಟು ಸಾಧ್ಯವೋ ಅಷ್ಟು ಡ್ಯಾಮೇಜ್ ಮಾಡ್ತಿದೆ.

ದೋಸ್ತಿ‌‌ ಪಕ್ಷಗಳಲ್ಲಿ ಬಿರುಕು ಹೊಸದೇನು ಅಲ್ಲ. ಈ ಎಲ್ಲ ಬೆಳವಣಿಗೆ ಕಂಡು ಡಿಸಿಎಂ ಪರಮೇಶ್ವರ್ ಅವರೇ ಕಂಗಾಲಾಗಿದ್ದಾರೆ. ಜೆಡಿಎಸ್ ರಾಜಕೀಯ ದಾಳಗಳಿಗೆ ಕಾಂಗ್ರೆಸ್ ನಾಯಕರು ಒಳಗೊಳಗೆ ಆಕ್ರೋಶ ಹೊರಹಾಕಿದರೂ ಏನು ಮಾಡದ ಸ್ಥಿತಿಯಲ್ಲಿ ಇದ್ದಾರೆ.

ರೇವಣ್ಣ-ದೇವೇಗೌಡರ ತಂತ್ರಗಾರಿಕೆಗೆ ತಡವಾಗಿ ಬೆಚ್ಚಿ ಬೆರಗಾಗಿರುವ ಡಿಸಿಎಂ ಪರಮೇಶ್ವರ  ಏನಾಗುತ್ತಿದೆ ಎಂಬುದರ ಮಾಹಿತಿ ಪಡೆದುಕೊಳ್ಳಲು ಹೆಣಗಾಡುತ್ತಿದ್ದಾರೆ. ಬೆಂಗಳೂರು ನಗರಾಭಿವೃದ್ದಿ ಖಾತೆ ಡಮ್ಮಿ ಮಾಡಲು ಎಚ್.ಡಿ.ರೇವಣ್ಣ ಅವರೇ ಮುಂದಾಗಿದ್ದು 16 ಸಾವಿರ ಕೋಟಿಯ ಬೆಂಗಳೂರು ಎಲಿವೇಟೆಡ್ ಕಾರಿಡಾರ್ ಯೋಜನೆ ರೇವಣ್ಣ ಕೈಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಲಭ್ಯವಾಗಿದೆ.

ಸಿಎಂ ವಿರುದ್ಧ ಸಿದ್ದು ಸಿಟ್ಟು

ಡಿಸಿಎಂ ಪರಮೇಶ್ವರ್ ಖಾತೆ ವ್ಯಾಪ್ತಿಯ ಯೋಜನೆ ಈಗ ಎಚ್.ಡಿ ರೇವಣ್ಣ ಅವರಿಂದ ಹೈಜಾಕಾಗಿದೆ. ತಮ್ಮದೆ ಖಾತೆಯ ಮಹತ್ವಾಕಾಂಕ್ಷೆ ಯೋಜನೆ ಹೈಜಾಕಾಗಿದ್ದನ್ನ ಕಂಡು ಸ್ವತಾ ಡಿಸಿಎಂ ಕಕ್ಕಾಬಿಕ್ಕಿಯಾಗಿದ್ದಾರೆ. ಬೆಂಗಳೂರು ಎಲಿವೇಟೆಡ್ ರಿಂಗ್ ರೋಡ್ ಎಂಬ ಮಹತ್ವದ ಯೋಜನೆಗೆ ಸಿಎಂ ಕುಮಾರಸ್ವಾಮಿ ಬಜೆಟ್ ನಲ್ಲಿ16 ಸಾವಿರ ಕೋಟಿ‌ ಮೀಸಲಿಟ್ಟಿದ್ದರು..

ಡಿಸಿಎಂ ಪರಮೇಶ್ವರ್ ಹೊಂದಿರುವ  ಬೆಂಗಳೂರು ನಗರಾಭಿವೃದ್ದಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯರೂಪಕ್ಕೆ ಬರಬೇಕಿತ್ತು. ಬೆಂಗಳೂರು ನಗರಾಭಿವೃದ್ದಿ ಇಲಾಖೆ ಅಧೀನದಲ್ಲಿ‌ ನಡೆಯಬೇಕಿದ್ದ ಯೋಜನೆಗೆ,  ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಪ್ರಾಜೆಕ್ಟ್ ರಿಪೋರ್ಟ್ ತಯಾರಿಸಲು ರೇವಣ್ಣ ಮುಂದಾಗಿದ್ದಾರೆ.

ಇನ್ನೊಂದು ಕಡೆ ಕಾಂಗ್ರೆಸ್ ಆಪ್ತ ವಲಯದ ಅಧಿಕಾರಿಗಳನ್ನು ಸಿಎಂ ಎತ್ತಂಗಡಿ ಮಾಡಿದ್ದಾರೆ. ಐಎಎಸ್ ಗಳ ವರ್ಗಾವಣೆ ವಿಷಯದಲ್ಲಿ ಕಾಂಗ್ರೆಸ್ ನ ಸಚಿವರು,ಶಾಸಕರು ಹಾಗೂ ಸಂಸದರು ಸಿದ್ದರಾಮಯ್ಯ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಾಲಯ್ಯ ಅವರನ್ನ ವರ್ಗಾಯಿಸಿ ಅವರ ಸ್ಥಾನಕ್ಕೆ ಸಿಎಂ‌ ಕುಮಾರಸ್ವಾಮಿ ಅವರ ಆಪ್ತ ಕರಿಗೌಡರನ್ನ ನೇಮಕ ಮಾಡಲಾಗಿದೆ.

ಸಂಸದ ವೀರಪ್ಪ ಮೊಯ್ಲಿ, ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಅಸಮಧಾನ ಹೊರಹಾಕಿದ್ದಾರೆ. ಕೆಎಎಸ್ ನಿಂದ ಐಎಎಸ್ ಗೆ ಇತ್ತೀಚೆಗಷ್ಟೆ ಪದೋನ್ನತಿ ಹೊಂದಿದ ಕರಿ ಗೌಡರನ್ನು ಅರ್ಹತೆ ಮೀರಿ ಮುಖ್ಯಮಂತ್ರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಿ ನೇಮಿಸಿದ್ದಾರೆ ಎಂದು ದೂರಿದ್ದಾರೆ.

ಕೊಳಚೆ ನಿರ್ಮೂಲನಾ ಮಂಡಳಿ ಆಯುಕ್ತರನ್ನಾಗಿ ತಾವು ಹೇಳಿದವರನ್ನು ನೇಮಿಸಿಲ್ಲ ಎಂದು ಸಚಿವ ಯು.ಟಿ.ಖಾದರ್ ಸಹಾ ಅಸಮಧಾನ. ತಾವು ಹೇಳಿದ ಅಧಿಕಾರಿಯ ಬದಲಿಗೆ ಸತೀಶ್ ಎಂಬುವವರನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ.ನಮ್ಮ ಇಲಾಖೆಯಲ್ಲಿ ನಮ್ಮ ಮಾತಿಗೆ ಬೆಲೆಯಿಲ್ಲಾ ಎಂದರೆ ಏನು ಅರ್ಥ ಎಂದು ಖಾದರ್ ತಮ್ಮ ಪಕ್ಷದ ಮುಖಂಡರ ಬಳಿ ಅಸಮಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಅನಿವಾರ್ಯ ಕಾರಣಕ್ಕೆ ಜೆಡಿಎಸ್ ನೊಂದಿಗೆ ಕೈಜೋಡಿಸಿರುವ ಕಾಂಗ್ರೆಸ್ ಇದೀಗ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವುದಕ್ಕೆ ಪರದಾಡಬೇಕಾದ ಅನಿವಾರ್ಯಕ್ಕೆ ಸಿಲುಕಿದೆ.