ಬೆಂಗಳೂರು[ಮೇ.25]: ರಾಜ್ಯದಲ್ಲೂ ಸರ್ಕಾರ ಸ್ಥಾಪಿಸುವ ಬಿಜೆಪಿ ನಾಯಕರ ಉಮೇದಿ ಹಾಗೂ ಶತಾಯಗತಾಯ ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ನಿರ್ಧಾರವು ಕಾಂಗ್ರೆಸ್‌ನ ಅತೃಪ್ತ ಶಾಸಕರಿಗೆ ಭಾರೀ ಲಾಭ ತಂದುಕೊಡುವ ಸಾಧ್ಯತೆಯಿದೆ.

ಉಭಯ ಪಕ್ಷಗಳ ಅಸ್ತಿತ್ವದ ದೃಷ್ಟಿಯಿಂದ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‌ -ಜೆಡಿಎಸ್‌ ನಾಯಕರು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಕಾಂಗ್ರೆಸ್‌ ಬಿಟ್ಟು ಹೋಗದಂತೆ ಮನವೊಲಿಸಲು ತೀರ್ಮಾನಿಸಿದ್ದಾರೆ. ಇದಕ್ಕಾಗಿ ಅಗತ್ಯ ಬಿದ್ದರೆ ಹಾಲಿ ಸಚಿವ ರಾಜೀನಾಮೆ ಪಡೆದು ಆ ಸ್ಥಾನವನ್ನು ಅತೃಪ್ತರಿಗೆ ಕೊಡುವ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ. ಅಲ್ಲದೆ, ಅತೃಪ್ತ ಶಾಸಕರ ಕ್ಷೇತ್ರದ ಕೆಲಸ ಕಾರ್ಯಗಳನ್ನು ಆದ್ಯತೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎನ್ನಲಾಗಿದೆ.

ಇದೇ ವೇಳೆ ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರದ ನಂತರ ರಾಜ್ಯದಲ್ಲಿ ಮೈತ್ರಿ ಕೂಟದ ಸರ್ಕಾರದ ಬದಲಿಸುವ ಪ್ರಯತ್ನವೂ ಆರಂಭವಾಗುವ ನಿರೀಕ್ಷೆಯಿದೆ. ರಮೇಶ್‌ ಜಾರಕಿಹೊಳಿ ಸೇರಿದಂತೆ ಕೆಲ ಕಾಂಗ್ರೆಸ್‌ ಅತೃಪ್ತ ಶಾಸಕರು ಈಗಾಗಲೇ ಬಿಜೆಪಿ ಸಂಪರ್ಕದಲ್ಲಿದ್ದಾರೆ. ಸುಮಾರು 10 ಅತೃಪ್ತ ಶಾಸಕರು ಬಿಜೆಪಿಯತ್ತ ವಾಲಿದರೂ ಸಹ ಮೈತ್ರಿ ಕೂಟ ಸರ್ಕಾರಕ್ಕೆ ಸಂಚಕಾರ ಬರುವ ಸಾಧ್ಯತೆಯಿದೆ. ಹೀಗಾಗಿ ಬಿಜೆಪಿಯು ಅತೃಪ್ತರನ್ನು ಓಲೈಸುವ ಸಾಧ್ಯತೆಯಿದೆ. ಮೈತ್ರಿ ಪಕ್ಷಗಳು ಹಾಗೂ ಬಿಜೆಪಿ ನಡುವೆ ಚೌಕಾಸಿ ನಡೆಸಿ ಸಾಧ್ಯವಾದಷ್ಟುಹೆಚ್ಚು ಲಾಭ ಮಾಡಿಕೊಳ್ಳುವ ಅವಕಾಶ ಇದೀಗ ಅತೃಪ್ತ ಶಾಸಕರಿಗೆ ಒದಗಿ ಬಂದಿದೆ ಎನ್ನಲಾಗುತ್ತಿದೆ.