ಬೆಂಗಳೂರು (ಆ. 06): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು  ಉತ್ತರ ಕರ್ನಾಟಕದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರವಾಹ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಚರಿಸಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆದರು.

ಆದರೆ, ಹವಾಮಾನ ವೈಪರೀತ್ಯದಿಂದಾಗಿ ಬೆಳಗಾವಿ ಪ್ರವಾಸ ರದ್ದುಪಡಿಸಿದರು. ಅತಿ ಹೆಚ್ಚು ಹಾನಿಗೀಡಾಗಿರುವ ಬೆಳಗಾವಿ ಜಿಲ್ಲೆಯಲ್ಲಿ ಮುಖ್ಯಮಂತ್ರಿಯವರ ವೀಕ್ಷಣೆಗೆ ಸಾಧ್ಯವಾಗಲಿಲ್ಲ.

ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ಹೊರಟು ಬೆಳಗ್ಗೆ 9.30ಕ್ಕೆ ಬಳ್ಳಾರಿಯ ತೋರಣಗಲ್‌ನಲ್ಲಿರುವ ಜಿಂದಾಲ್‌ ವಿಮಾನ ನಿಲ್ದಾಣ ತಲುಪಿದ ಯಡಿಯೂರಪ್ಪ ರಾಯಚೂರು ಕಡೆಗೆ ಹೆಲಿಕಾಪ್ಟರ್‌ ಪ್ರಯಾಣ ಬೆಳೆಸಿದರು. ಸುಮಾರು 10.30ಕ್ಕೆ ರಾಯಚೂರು ತಲುಪಿದ ಅವರ ಜಿಲ್ಲಾಧಿಕಾರಿ ಶರತ್‌, ಬಿ.ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ್‌, ಗ್ರಾಮೀಣ ಶಾಸಕ ಗದ್ದಲಬಸನಗೌಡ ಅವರಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗೋಷ್ಠಿ ನಡೆಸಿ 11.30ಕ್ಕೆ ಅಲ್ಲಿಂದ ವಿಜಯಪುರದ ಕಡೆಗೆ ಹೊರಟರು. ಈ ವೇಳೆ ಅವರು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ನೆರೆಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.

ಸುಮಾರು 1 ಗಂಟೆ ಸುಮಾರಿಗೆ ವಿಜಯಪುರ ಜಿಲ್ಲೆಗೆ ಆಗಮಿಸಿದ ಅವರು ಅಲ್ಲಿ ಪ್ರವಾಹ ಪೀಡಿತ ಪ್ರದೇಶ, ಆಲಮಟ್ಟಿಜಲಾಶಯ, ಬಸವಸಾಗರ ಜಲಾಶಯ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ವಿಜಯಪುರದಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಯ ಅಧಿಕಾರಿಗಳು ಮತ್ತು ಶಾಸಕರ ಸಭೆ ನಡೆಸಿ 2.25ಕ್ಕೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.