ಬೆಂಗಳೂರು (ಜೂ.13) :  ವಾಣಿಜ್ಯ ಬ್ಯಾಂಕ್‌ಗಳ ರೈತರ ಸಾಲಮನ್ನಾಗೆ ಸಂಬಂಧಪಟ್ಟಂತೆ ಉಂಟಾದ ಗೊಂದಲಗಳಿಗೆ ಮುಕ್ತಾಯ ಹೇಳಲು ರೈತರ ಬಾಕಿ ಉಳಿದಿರುವ ಬೆಳೆಸಾಲದ ಮೊತ್ತ 3397.48 ಕೋಟಿ ರು.ಗಳನ್ನು ಸರ್ಕಾರ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ಕ್ರಮದಿಂದ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸುಮಾರು 7.49 ಲಕ್ಷ ರೈತರು ಋುಣಮುಕ್ತವಾಗಲಿದ್ದಾರೆ.

ಅರ್ಹತೆ ಹೊಂದಿರುವ ಮರು ಹೊಂದಾಣಿಕೆ ಸಾಲಗಳು, ಅರ್ಹತೆ ಹೊಂದಿರುವ ದೀರ್ಘಕಾಲದಿಂದ ಉಳಿದಿರುವ ಸಾಲಗಳು (ಓವರ್‌ ಡ್ಯೂ ಲೋನ್‌) ಮತ್ತು ಪ್ರೋತ್ಸಾಹಧನಕ್ಕೆ ಅರ್ಹವಾಗಿರುವ ಸಾಮಾನ್ಯ ಸಾಲಗಳಿಗೆ (ರೆಗ್ಯುಲರ್‌ ಲೋನ್‌) ಬಿಡುಗಡೆಯಾಗಿರುವ ಮೊತ್ತವನ್ನು ಕಡಿತಗೊಳಿಸಿ ಉಳಿದ ಸಾಲದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲಾಗಿದೆ. ಅನುಪಯುಕ್ತ ಸಾಲಗಳು (ಎನ್‌ಪಿಎ ಲೋನ್‌) ಮತ್ತು 2018ರ ಜನವರಿ 1ರಿಂದ ಬಡ್ಡಿ ಮೊತ್ತ ಪಾವತಿಸುವ ಬಗ್ಗೆ ಪ್ರತ್ಯೇಕವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮರು ಹೊಂದಾಣಿಕೆ ಸಾಲಗಳ ಸಾಲಮನ್ನಾದಡಿ 2,812 ಕೋಟಿ ರು., ದೀರ್ಘಕಾಲದಿಂದ ಉಳಿದಿರುವ ಸಾಲದಡಿ 3,057 ಕೋಟಿ ರು., ಪ್ರೋತ್ಸಾಹಧನಕ್ಕೆ ಅರ್ಹವಾಗಿರುವ ಸಾಮಾನ್ಯ ಸಾಲಮನ್ನಾ ಯೋಜನೆಯಡಿ 720 ಕೋಟಿ ರು. ಹಣದಲ್ಲಿ ಈಗಾಗಲೇ ಮಾಡಿರುವ ಹಣ ಕಡಿತಗೊಳಿಸಿ ಉಳಿದ ಹಣವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ. ಬಾಕಿ ಹಣವನ್ನು ಭೂಮಾಪನ ಕಂದಾಯ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರ ಖಾತೆಯಲ್ಲಿರುವ ಹಣ ಬಳಸಿಕೊಳ್ಳಲು ಸೂಚಿಸಲಾಗಿದೆ. ಹಣದ ಕೊರತೆ ಉಂಟಾದರೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ತಿಳಿಸಲಾಗಿದೆ.

ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬಾಕಿ ಇರುವ ರೈತರ ಸಾಲವನ್ನು ನಾಲ್ಕು ಸಮಾನ ಕಂತುಗಳಲ್ಲಿ ಪಾವತಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಅಂತೆಯೇ ವಾಣಿಜ್ಯ ಬ್ಯಾಂಕ್‌ಗಳ ಮುಖ್ಯಸ್ಥರ ಜತೆಗೂ ಚರ್ಚೆ ನಡೆಸಿ ಈವರೆಗೆ ಸುಮಾರು ಮೂರು ಸಾವಿರ ಕೋಟಿ ರು.ನಷ್ಟುಸಾಲಮನ್ನಾದ ಹಣವನ್ನು ವಾಣಿಜ್ಯ ಬ್ಯಾಂಕ್‌ಗಳಿಗೆ ಪಾವತಿಸಲಾಗಿತ್ತು. ವಾಣಿಜ್ಯ ಬ್ಯಾಂಕ್‌ಗಳ ಸಾಲ ವರ್ಗೀಕರಣ ನೀತಿಯಿಂದ ರೈತರ ಸಾಲಮನ್ನಾ ತೊಡಕಾಗಿ ರೈತರಿಗೆ ಸಾಲಮನ್ನಾದ ಲಾಭ ಸಿಗದಂತಾಗಿ ಗೊಂದಲ ಉಂಟಾಗಿದ್ದವು. ಇದಕ್ಕೆಲ್ಲಾ ಮುಖ್ಯಮಂತ್ರಿಗಳು ಒಂದೇ ಕಂತಿನಲ್ಲಿ ಹಣ ಬಿಡುಗಡೆಗೊಳಿಸಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ವಾಣಿಜ್ಯ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಒಟ್ಟು ಸಾಲದ ಮೊತ್ತವು 7563.27 ಕೋಟಿ ರು. ಆಗಿದ್ದು, ಈ ಸಾಲದ ಬಡ್ಡಿಯ ಮೇಲಿನ ಮೊತ್ತ 983.94 ಕೋಟಿ ರು. ಆಗಿದೆ. ಒಟ್ಟು 8547.46 ಕೋಟಿ ರು. ರೈತರ ಸಾಲಮನ್ನಾ ಆಗಬೇಕಾಗಿದೆ. ಈ ಪೈಕಿ 3930.15 ಕೋಟಿ ರು. ರೈತರ ಖಾತೆಗೆ ರಾಜ್ಯ ಸರ್ಕಾರ ಜಮೆ ಮಾಡಿದೆ. ನೋಡಲ್‌ ಇಲಾಖೆಗಳಿಗೆ ಈಗಾಗಲೇ 5150 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಸದ್ಯ ನೋಡಲ್‌ ಇಲಾಖೆಯ ಬಳಿ 1219.83 ಕೋಟಿ ರು. ಇದೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.