ಬೆಂಗಳೂರು :  ಸರ್ಕಾರದ ಆಡಳಿತಕ್ಕೆ ಚುರುಕು ಮೂಡಿಸಲು ಮುಂದಾಗಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ‘ಗ್ರಾಮ ವಾಸ್ತವ್ಯ’ ಕಾರ್ಯಕ್ರಮ ಇದೇ ತಿಂಗಳ 21ರಿಂದ ಆರಂಭಗೊಳ್ಳಲಿದೆ.

ಹಿಂದುಳಿದ ಜಿಲ್ಲೆ ಎಂದು ಗುರುತಿಸಿಕೊಂಡಿರುವ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್‌ ತಾಲೂಕಿನಲ್ಲಿ ಕುಮಾರಸ್ವಾಮಿ ಈ ಸರ್ಕಾರದ ಮೊದಲ ಗ್ರಾಮ ವಾಸ್ತವ್ಯ ನಡೆಸಲಿದ್ದಾರೆ. 13 ವರ್ಷಗಳ ಹಿಂದೆ ಜೆಡಿಎಸ್‌ ಮತ್ತು ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವೇಳೆ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಆರಂಭಿಸಿದ್ದರು. ಇದೀಗ ಎರಡನೇ ಹಂತದಲ್ಲಿ ಒಟ್ಟಿಗೆ ನಾಲ್ಕು ಗ್ರಾಮ ವಾಸ್ತವ್ಯಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳು ರಾಜ್ಯದ ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲೇ ನಿಗದಿಯಾಗಿವೆ.

ಜೂನ್‌ 21ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನಲ್ಲಿ ಹಾಗೂ ಮರುದಿನ 22ರಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿಗದಿಯಾಗಿದೆ. ಬಳಿಕ ಜುಲೈ 5ರಂದು ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಮತ್ತು ಮರುದಿನ 6ರಂದು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಕಾರ್ಯಕ್ರಮ ಅಖೈರುಗೊಳಿಸಲಾಗಿದೆ. ಆಯಾ ತಾಲೂಕುಗಳಲ್ಲಿ ಯಾವ ಗ್ರಾಮಗಳು ಎಂಬುದನ್ನು ಇನ್ನಷ್ಟೇ ಅಂತಿಮಗೊಳಿಸಬೇಕಾಗಿದೆ.

ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾವು ಆರಂಭಿಸಲು ಉದ್ದೇಶಿಸಿರುವ ಗ್ರಾಮ ವಾಸ್ತವ್ಯದ ಕುರಿತು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. ಈ ಗ್ರಾಮ ವಾಸ್ತವ್ಯದ ಸ್ವರೂಪ ಹೇಗಿರಬೇಕು ಎಂಬ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಹ್ಮಣ್ಯ, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ.ಈ.ವಿ.ರಮಣ ರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌.ಪ್ರಸಾದ್‌, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್‌.ಸೆಲ್ವಕುಮಾರ್‌ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.