ಬೀದರ್‌ [ಜೂ.28] :  ‘ಗ್ರಾಮವಾಸ್ತವ್ಯ ಟೀಕಿಸುವವರಿಗೆ ಜನತಾ ದರ್ಶನ ನಡೆಸುವ ತಾಕತ್ತು ಗೊತ್ತಿಲ್ಲ. ಎಂಟು ಗಂಟೆ ಜನರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಸೂಚಿಸುವುದು ಸಾಮಾನ್ಯ ಮಾತೇನಲ್ಲ. ಇದನ್ನು ನಾಟಕ ಎಂದೆನ್ನುವವರು ಕೇವಲ ಒಂದು ದಿನ ಪೂರ್ತಿ ಕುಳಿತು ಅರ್ಜಿ ಪಡೆಯಲು ನೋಡೋಣ’

- ಇದು ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ನಾಟಕ ಎಂದು ಟೀಕಿಸುತ್ತಿರುವ ಬಿಜೆಪಿ ಮುಖಂಡರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಸೆದಿರುವ ಸವಾಲು.

ಬೀದರ್‌ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಉಜಳಂಬದಲ್ಲಿ ಗುರುವಾರದಂದು ತಮ್ಮ ಎರಡನೇ ಸುತ್ತಿನ ಮೊದಲ ಹಂತದ ಕೊನೆಯ ಗ್ರಾಮವಾಸ್ತವ್ಯ, ಜನತಾ ದರ್ಶನ ನಡೆಸಿದ ಕುಮಾರಸ್ವಾಮಿ ತಮ್ಮ ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದರು. ಇದಕ್ಕೆ ಮೊದಲು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗಲೂ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.

ನನ್ನ ಹಳೆಯ ಸ್ನೇಹಿತರು ಗ್ರಾಮವಾಸ್ತವ್ಯ ಟೀಕಿಸುತ್ತಿದ್ದಾರೆ. ಅವರಿಗೆ ಇದರ ಅಂತಃಕರಣ ಗೊತ್ತಿಲ್ಲ. ಗ್ರಾಮ ವಾಸ್ತವ್ಯದಲ್ಲಿ ಏಳೆಂಟು ಗಂಟೆ ಸತತ ಮನವಿ ಸ್ವೀಕರಿಸಿ ಸಮಸ್ಯೆ ಆಲಿಸಿ ಪರಿಹರಿಸುತ್ತೇನೆ. ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದರಲ್ಲಿ, ಅಲ್ಲಿನ ಜನರ ಬೇಕು ಬೇಡಗಳನ್ನು ಒಂದು ಸರ್ಕಾರವಾಗಿ ಆಲಿಸುವುದರಲ್ಲಿ ಗ್ರಾಮ ವಾಸ್ತವ್ಯ ಸಾಕಷ್ಟುಸಹಕಾರಿಯಾಗಿದೆ. ಒಟ್ಟಾರೆಯಾಗಿ ಗ್ರಾಮ ವಾಸ್ತವ್ಯದ ಮೂಲಕ ಸರ್ಕಾರವನ್ನು ಹಳ್ಳಿಯ ಜನರ ಬಾಗಿಲಿಗೇ ತಲುಪಿಸುತ್ತಿದ್ದೇನೆ ಎಂದು ಸಮರ್ಥಿಸಿಕೊಂಡರು.

ಬಿಜೆಪಿಗರು ಬಂದು ನೋಡಲಿ:

ಸತತ ಕನಿಷ್ಠ 8 ಗಂಟೆ ಜನರ ಸಮಸ್ಯೆಗಳನ್ನು ಕೇಳುವುದಷ್ಟೇ ಅಲ್ಲ, ಅವುಗಳನ್ನು ತದೇಕಚಿತ್ತದಿಂದ ಆಲಿಸಿ ಅವುಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿ ಆದೇಶಿಸುವುದು ಸಾಮಾನ್ಯ ಮಾತೇನಲ್ಲ. ಗ್ರಾಮೀಣರ ಭಾವನೆಗಳಿಗೆ ನಾವು ಗೌರವಿಸಬೇಕು, ಸಂತ್ರಸ್ತರಿಗೆ ಪರಿಹಾರ ಕಲ್ಪಿಸುವ ಜವಾಬ್ದಾರಿ ನಿರ್ವಹಿಸಬೇಕು ಎಂದರು. ಗ್ರಾಮ ವಾಸ್ತವ್ಯದ ಬಗ್ಗೆ, ಅದರ ವೆಚ್ಚಗಳ ಬಗ್ಗೆ ಮಾತನಾಡುವ ಬಿಜೆಪಿಯವರು ಬೇಕಾದರೆ ಬಂದು ನೋಡಲಿ. ನಾನು ವಾಸ್ತವ್ಯ ಮಾಡಿದ ಕಡೆಗಳಲ್ಲೆಲ್ಲಾ ಶಾಲೆಗಳಿಗೆ ಮೂಲ ಸವಲತ್ತು ಲಭ್ಯವಾಗಿದೆ. ಅಂತಹ ಹಳ್ಳಿಗಳಲ್ಲಿ ಅನೇಕ ಕಾಮಗಾರಿಗಳು ಆಗಿವೆ. ವಿನಾಕಾರಣ ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ತಿರುಗೇಟು ನೀಡಿದರು.

ಇದೇವೇಳೆ ಈ ಸರ್ಕಾರ ಜನಪರ ಸರ್ಕಾರವಾಗಿದ್ದು ನಿಮ್ಮಲ್ಲಿಗೇ ಸರ್ಕಾರ ಬಂದಿದೆ ಅದರ ಸದ್ಬಳಕೆ ಮಾಡಿಕೊಳ್ಳಿ. ಯಾರೇ ಏನೇ ಹೇಳಲಿ ಏನೇ ಮಾಡಲಿ 5 ವರ್ಷ ಸಂಪೂರ್ಣ ಅವಧಿಯನ್ನು ಈ ಸಮ್ಮಿಶ್ರ ಸರ್ಕಾರ ಪೂರೈಸುತ್ತದೆ. ನಮ್ಮ ಮೇಲೆ ನಂಬಿಕೆ ಇಡಿ ಸಾಕು, ದೇಶದ ಅತ್ಯುತ್ತಮ ರಾಜ್ಯವನ್ನಾಗಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.