ಬೆಂಗಳೂರು [ಜು.30]:  ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ನೇಕಾರರ ಸಾಲಮನ್ನಾ ಮಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಇದೀಗ ಮೀನುಗಾರರಿಗೂ ಬಂಪರ್‌ ಕೊಡುಗೆ ನೀಡಿದ್ದಾರೆ. ಮೀನುಗಾರರ 60.58 ಕೋಟಿ ರು. ಸಾಲ ಮನ್ನಾ ಮಾಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದಾರೆ. ಮೀನುಗಾರರು ಮೀನುಗಾರಿಕೆ ಚಟುವಟಿಕೆಗಳಿಗೆ ವಾಣಿಜ್ಯ ಮತ್ತು ಪ್ರಾದೇಶಿಕ ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲಾಗಿದೆ. 2017-18, 2018-19ನೇ ಸಾಲಿನಲ್ಲಿ ಮೀನುಗಾರರು ಪಡೆದ ಸಾಲ ಮನ್ನಾ ಮಾಡಿ ಆದೇಶಿಸಲಾಗಿದೆ. ಈ ಆದೇಶದಿಂದ 23507 ಮೀನುಗಾರರಿಗೆ ಅನುಕೂಲವಾಗಲಿದೆ.

ಮೀನುಗಾರರು ಮತ್ತು ವಿಶೇಷವಾಗಿ ಮಹಿಳಾ ಮೀನುಗಾರರು ಮೀನುಗಾರಿಕೆ ಚಟುವಟಿಕೆಗಳಾದ ಮೀನು ಮಾರಾಟ ಪರಿಕರಗಳ ಖರೀದಿ, ಮೀನಿನ ವ್ಯಾಪಾರಕ್ಕಾಗಿ ಬಂಡವಾಳ , ಮೀನಿನ ಸಂರಕ್ಷಣೆ ಮತ್ತು ಮೀನಿನ ಸಾಗಾಣಿಕೆ ಇತರೆ ಮೀನುಗಾರಿಕೆ ಸಂಬಂಧಿತ ಚಟುವಟಿಕೆಗಳನ್ನು ಕೈಗೊಳ್ಳಲು ಆರ್ಥಿಕ ನೆರವು ನೀಡುವ ದೃಷ್ಟಿಯಿಂದ ಶೇ.2ರಷ್ಟುಬಡ್ಡಿ ದರದಲ್ಲಿ ವಾಣಿಜ್ಯ ಬ್ಯಾಂಕ್‌ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಂದ 50 ಸಾವಿರ ರು.ವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ. 

ಪಡೆದ ಸಾಲವನ್ನು 24 ತಿಂಗಳಲ್ಲಿ ಬ್ಯಾಂಕುಗಳಿಗೆ ಮರುಪಾವಿತಿಸಿದ ಮೀನುಗಾರರು ವ್ಯತ್ಯಾಸದ ಬಡ್ಡಿ ಮೊತ್ತಕ್ಕೆ ಪ್ರಯೋಜನ ಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ಕಳೆದ ಮೂರು ವರ್ಷದ ಅವಧಿಯಲ್ಲಿ ಈ ರೀತಿ ಪಡೆದ ಸಾಲವನ್ನು ಅನೇಕ ಮೀನುಗಾರರು ಪಾವತಿ ಮಾಡದ ಕಾರಣ 60.58 ಕೋಟಿ ರು. ಸಾಲ ವಸೂಲಿ ಬಾಕಿ ಇತ್ತು. ಹೀಗಾಗಿ ಸಚಿವ ಸಂಪುಟ ಸಭೆಯಲ್ಲಿ ಈ ಸಾಲವನ್ನು ಮನ್ನಾ ಮಾಡಲು ನಿರ್ಧರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.