4 ಬಣಗಳಾಗಿ ಒಡೆದು ಕಾಂಗ್ರೆಸ್ ಬಂಡಾಯ

Karnataka Cabinet Formation: Rebels  Trouble in Congress
Highlights

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಬಂಡಾಯ ತೀವ್ರಗೊಂಡು 4  ಪ್ರತ್ಯೇಕ ಗುಂಪುಗಳು ಹುಟ್ಟಿಕೊಂಡಿದೆ. ಇದರ ನಡುವೆಯೇ ಅತೃಪ್ತರನ್ನು ಸಮಾಧಾನ ಪಡಿಸಲು ಕೆಪಿಸಿಸಿ  ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಅವರು ಸಂಧಾನಕಾರರನ್ನು ಕಳುಹಿಸಿ ಪರಿಸ್ಥಿತಿಗೆ ತಹಬದಿಗೆ ತರಲು ಯತ್ನಿಸಿದ್ದಾರೆ. 

ಬೆಂಗಳೂರು :  ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ಆಕಾಂಕ್ಷಿಗಳ ಬಂಡಾಯ ತೀವ್ರಗೊಂಡು 4  ಪ್ರತ್ಯೇಕ ಗುಂಪುಗಳು ಹುಟ್ಟಿಕೊಂಡಿದೆ. ಪಕ್ಷದ ನಾಯಕತ್ವದ ವಿರುದ್ಧ ಆಕ್ರೋಶಗೊಂಡಿರುವ ಈ ಶಾಸಕರ ತಂಡಗಳು ಮುಂದೇನು ಮಾಡಬೇಕು ಎಂಬ ಬಗ್ಗೆ ಗುರುವಾರ ಇಡೀ ದಿನ ಪ್ರತ್ಯೇಕವಾಗಿ ಸಭೆ ನಡೆಸಿ ಚರ್ಚಿಸಿ ದವು. ಇದರ ನಡುವೆಯೇ ಅತೃಪ್ತರನ್ನು ಸಮಾಧಾನ ಪಡಿಸಲು ಕೆಪಿಸಿಸಿ  ಅಧ್ಯಕ್ಷ ಡಾ| ಜಿ. ಪರಮೇಶ್ವರ್ ಅವರು ಸಂಧಾನಕಾರರನ್ನು ಕಳುಹಿಸಿ ಪರಿಸ್ಥಿತಿಗೆ ತಹಬದಿಗೆ ತರಲು ಯತ್ನಿಸಿದರು. 

ಅಲ್ಲದೆ, ತಮ್ಮ ನಿವಾಸದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರ ಸಭೆ ಕರೆದು, ಅತೃಪ್ತಿಗೊಂಡ ಶಾಸಕರು ಯಾರು? ಅವರ ಅಸಮಾಧಾನಕ್ಕೆ ಕಾರಣವೇನು? ಮುಂದೇನು ಮಾಡಬಹುದು ಹಾಗೂ ಅತೃಪ್ತಿ ಶಮನಕ್ಕೆ ತಾವೇನು ಮಾಡಬೇಕು ಎಂಬ ಬಗ್ಗೆ ಮಾಹಿತಿ ಪಡೆದು, ಹೈಕಮಾಂಡ್‌ಗೆ ವಸ್ತುಸ್ಥಿತಿಯ ಬಗ್ಗೆ ಮಾಹಿತಿ ನೀಡುವ ತೀರ್ಮಾನ ಕೈಗೊಂಡರು ಎನ್ನಲಾಗಿದೆ.

ಅತೃಪ್ತರ ಚಟುವಟಿಕೆಗಳು ಗುರುವಾರ ತೀವ್ರಗೊಂಡಿದ್ದು, ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಚ್. ಆಂಜನೇಯ ನೇತೃತ್ವದ ಈ ನಾಲ್ಕು ಗುಂಪುಗಳು ಇಡೀ ದಿನ ಪ್ರತ್ಯೇಕವಾಗಿ ಸರಣಿ ಸಭೆಗಳನ್ನು ನಡೆಸಿದವು. ಎಂ.ಬಿ.ಪಾಟೀಲ್ ನೇತೃತ್ವದ ಗುಂಪಿನಲ್ಲಿದ್ದ ಬಹುತೇಕರು ತಮಗೆ ಸಚಿವ ಸ್ಥಾನ ತಪ್ಪಿಸಿದ್ದೇ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಎಂಬ ಆಕ್ರೋಶ ಹೊಂದಿದ್ದರೆ, ಎಚ್. ಕೆ.ಪಾಟೀಲ್ ನೇತೃತ್ವದ ಗುಂಪು ಉತ್ತರ ಕರ್ನಾಟಕಕ್ಕೆ ಈ ಬಾರಿ ಅನ್ಯಾಯವಾಗಿದೆ ಎಂಬ ಅಸಮಾಧಾನ ಹೊಂದಿದೆ.

ಶಾಮನೂರು ಶಿವಶಂಕರಪ್ಪ ಅವರ ಗುಂಪಿನಲ್ಲಿದ್ದವರ ಪೈಕಿ ಬಹುತೇಕರು ಲಿಂಗಾಯತರಾಗಿದ್ದು, ಸಂಪುಟದಲ್ಲಿ ಲಿಂಗಾ ಯತರಿಗೆ ಅನ್ಯಾಯವಾಗಿದೆ ಎಂಬ ದೂರು ಹೊಂದಿದ್ದಾರೆ. ಇನ್ನು ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ಗುಂಪನ್ನು ಈ ಬಾರಿ ಸಂಪುಟದಲ್ಲಿ ಪರಿಶಿಷ್ಟರಲ್ಲಿ ಎಡ ಪಂಗ ಡದವರಿಗೆ ಒಂದೂ ಸ್ಥಾನ ನೀಡದಿರುವುದು ಕೆರಳಿಸಿದೆ.  ಈ ಪೈಕಿ ದೊಡ್ಡ ಗುಂಪು ಎಂ.ಬಿ.ಪಾಟೀಲ್ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಸಭೆ ಸೇರಿತ್ತು. ಸತೀಶ್ ಜಾರಕಿಹೊಳಿ, ರಾಜು ಅಲಗೂರು, ಭೀಮಾನಾಯ್ಕ್, ಡಾ.ಸುಧಾಕರ್, ಪ್ರತಾಪ್‌ಗೌಡ ಪಾಟೀಲ್ ಸೇರಿದಂತೆ ಹತ್ತಾರು ಮಂದಿಯಿರುವ ಈ ಗುಂಪು ದಿನವಿಡೀ ಹಲವು ಸುತ್ತುಗಳ ಸಭೆಯನ್ನು ನಡೆಸಿತು. 

ಈ ಗುಂಪಿನಲ್ಲಿದ್ದ ಬಹುತೇಕರು ತಮಗೆ ಸಚಿವ ಸ್ಥಾನ ತಪ್ಪಿಸಿದ್ದೇ ಪರಮೇಶ್ವರ್ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಾರಾಂತ್ಯದಲ್ಲಿ ಹೈಕಮಾಂಡ್ ಭೇಟಿ ಮಾಡಿ ಪರಮೇಶ್ವರ್ ಅವರು ಹೇಗೆ ಪ್ರಮುಖ ನಾಯಕರ ಮೇಲೆ ದ್ವೇಷ ರಾಜಕಾರಣ ಮಾಡಿದ್ದಾರೆ ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಮತ್ತು ಅರ್ಹತೆಯಿದ್ದರೂ ಸಚಿವ ಖಾತೆ ತಪ್ಪಿಸಿಕೊಂಡವರಿಗೆ ನ್ಯಾಯ ಒದಗಿಸಲು ಒತ್ತಡ ನಿರ್ಮಾಣ ಮಾಡಬೇಕು ಎಂಬ ಸಲಹೆ ನೀಡಿದರು ಎನ್ನಲಾಗಿದೆ.

ರಾಹುಲ್ ಬಳಿಗೆ ಪರಿಶಿಷ್ಟರ ನಿಯೋಗ: ಇನ್ನು ಎಚ್. ಆಂಜನೇಯ ಅವರ ನೇತೃತ್ವದಲ್ಲಿ ಸಭೆ ಸೇರಿದ್ದ ಮಾದಿಗ ನಾಯಕರಾದ ಸಂಸದ ಬಿ.ಎನ್.ಚಂದ್ರಪ್ಪ, ರಾಜ್ಯಸಭಾ ಸದಸ್ಯ ಡಾ| ಎಲ್.ಹನುಮಂತಯ್ಯ, ಮಾಜಿ ಸಂಸದ ಕೆ. ಬಿ. ಕೃಷ್ಣಮೂರ್ತಿ,  ವಿಧಾನಪರಿಷತ್ ಸದಸ್ಯ ಧರ್ಮಸೇನ, ಶಾಸಕಿ ರೂಪಾ ಶಶಿಧರ್ ಮೊದಲಾದವರು ಈ ಬಾರಿ ಸಂಪುಟದಲ್ಲಿ ಪರಿಶಿಷ್ಟ ಎಡ ಪಂಗಡಕ್ಕೆ ಒಂದೂ ಸ್ಥಾನ  ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಸುಮಾರು 120 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿರುವ ಈ ಸಮುದಾ ಯಕ್ಕೆ ಒಂದು ಸಚಿವ ಸ್ಥಾನ ನೀಡದಿರುವುದು ಅನ್ಯಾಯ. ಇದನ್ನು ಕೂಡಲೇ ಸರಿಪಡಿಸುವಂತೆ ರಾಹುಲ್ ಗಾಂಧಿ ಅವರ ಬಳಿಗೆ ನಿಯೋಗವೊಂದನ್ನು ಒಯ್ಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಾರಿ ವಿಧಾನಸಭೆಗೆ ರೂಪಾ ಶಶಿಧರ್ ಅವರು ಆಯ್ಕೆಯಾಗಿದ್ದು, ಪರಿಷತ್ತಿನಲ್ಲಿ  ಆರ್. ಬಿ.ತಿಮ್ಮಾಪುರ ಹಾಗೂ ಧರ್ಮಸೇನ ಅವರು ಸಮುದಾಯ ವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ ಒಬ್ಬರಿಗೆ ಮುಂದಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡುವಂತೆ ಒತ್ತಡ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿ ಸಲಾಯಿತು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

ಉತ್ತರ ಕರ್ನಾಟಕಕ್ಕೆ ಅನ್ಯಾಯ: ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಪ್ರತ್ಯೇಕವಾಗಿ ಸಭೆ ಸೇರಿದ್ದ ಉತ್ತರ ಕರ್ನಾಟಕ ಭಾಗದ ಶಾಸಕರಿದ್ದ ಗುಂಪು ಸಂಪುಟದಲ್ಲಿ ಹಳೆ ಮೈಸೂರು ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ದೊರಕಿದ್ದು, ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಉತ್ತರ ಕರ್ನಾಟಕಕ್ಕೆ ಸೂಕ್ತ ಸ್ಥಾನಮಾನ ದೊರೆಯಬೇಕು. ಆ ಭಾಗದ ಪ್ರಮುಖ ನಾಯಕರಿಗೆ ಡಿಸಿಎಂ ಪದವಿ ನೀಡಬೇಕು ಇಲ್ಲವೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾದರೂ ಉತ್ತರ ಕರ್ನಾಟಕದ ಪ್ರಮುಖ ನಾಯಕರಿಗೆ ನೀಡುವಂತೆ ಹೈಕಮಾಂಡ್ ಅನ್ನು ಆಗ್ರಹಿಸಲು ತೀರ್ಮಾನಿಸಲಾಯಿತು ಎನ್ನಲಾಗಿದೆ. ಎಚ್. ಕೆ. ಪಾಟೀಲರ ನಿವಾಸದಲ್ಲಿ ನಡೆದ ಸಭೆಯಲ್ಲಿ ಎಸ್.ಆರ್. ಪಾಟೀಲ್, ಈಶ್ವರ್ ಖಂಡ್ರೆ ಸೇರಿದಂತೆ ಉತ್ತರ ಕರ್ನಾಟಕದ ಭಾಗದ ಶಾಸಕರು ಹಾಗೂ ಮುಖಂಡರು ಭಾಗಿಯಾಗಿದ್ದರು.

ಇನ್ನು ಶಾಮನೂರು ನಿವಾಸಕ್ಕೆ ಹಲವು ಲಿಂಗಾಯತ ಶಾಸಕರು ತೆರಳಿ ಮಾತುಕತೆ ನಡೆಸಿದ್ದು, ಸಂಪುಟದಲ್ಲಿ ಈ ಬಾರಿ ಲಿಂಗಾಯತರಿಗೆ ಕಡಿಮೆ ಸ್ಥಾನಗಳನ್ನು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಭೇಟಿ ಮಾಡಿ ಲಿಂಗಾಯತ ಪ್ರಾತಿನಿಧ್ಯವನ್ನು ಹೆಚ್ಚಿಸಬೇಕು ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಲಿಂಗಾಯತರಿಗೆ ನೀಡಬೇಕು ಎಂದು ಒತ್ತಾಯಿಸಲು ತೀರ್ಮಾನಿಸಲಾಯಿತು ಎಂದು ಮೂಲಗಳ ತಿಳಿಸಿವೆ.


ಎಂ.ಬಿ.ಪಾಟೀಲ್
ವಿಜಯಪುರ ಜಿಲ್ಲೆ ಬಬಲೇಶ್ವರ ಶಾಸಕ, ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ಗುಂಪಿನಲ್ಲಿದ್ದ ಬಹುತೇಕರು ತಮಗೆ ಸಚಿವ ಸ್ಥಾನ ತಪ್ಪಿಸಿದ್ದೇ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಎಂಬ ಆಕ್ರೋಶ ಹೊಂದಿದ್ದಾರೆ. 

ಎಚ್.ಕೆ.ಪಾಟೀಲ್
ಗದಗ ಶಾಸಕ, ಮಾಜಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್. ಕೆ.ಪಾಟೀಲ್ ನೇತೃತ್ವದ ಗುಂಪು ಉತ್ತರ ಕರ್ನಾಟಕಕ್ಕೆ ಈ ಬಾರಿ ಅನ್ಯಾಯವಾಗಿದೆ ಎಂಬ ಅಸಮಾಧಾನ ಹೊಂದಿದೆ.

ಶಾಮನೂರು ಶಿವಶಂಕರಪ್ಪ
ದಾವಣಗೆರೆ ದಕ್ಷಿಣ ಶಾಸಕ, ಮಾಜಿ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರ ಗುಂಪಿನಲ್ಲಿದ್ದವರ ಪೈಕಿ ಬಹುತೇಕರು ಲಿಂಗಾಯತರಾಗಿದ್ದು, ಸಂಪುಟದಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ ಎಂಬ ದೂರು ಹೊಂದಿದ್ದಾರೆ.

ಎಚ್.ಆಂಜನೇಯ
ಸಮಾಜ ಕಲ್ಯಾಣ ಖಾತೆ ಮಾಜಿ ಸಚಿವ ಎಚ್.ಆಂಜನೇಯ ನೇತೃತ್ವದ ಗುಂಪನ್ನು ಈ ಬಾರಿ ಸಂಪುಟದಲ್ಲಿ ಪರಿಶಿಷ್ಟರಲ್ಲಿ ಎಡ ಪಂಗಡದ ವರಿಗೆ ಒಂದೂ ಸ್ಥಾನ ನೀಡದಿರುವುದು ಕೆರಳಿಸಿದೆ. 

loader