ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದೇವೇಳೆ ಖಾಲಿ ಇರುವ ಸ್ಥಾನಗಳನ್ನು ಬ್ತೃಿ ಮಾಡುವ ಬಗ್ಗೆಯೂ ಕೂಡ ತಿಳಿಸಿದ್ದಾರೆ. 

ಬಾದಾಮಿ [ಸೆ.29] : ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕಾತಿ ಅ.10ರೊಳಗೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈ ಸಾಧ್ಯತೆ ಸುಳಿವನ್ನು ಬಾದಾಮಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೀಡಿದ್ದಾರೆ. 

ಬಾದಾಮಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಅ.3ರ ನಂತರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಂಪುಟದಲ್ಲಿ ಖಾಲಿ ಇರುವ ಎಲ್ಲಾ ಆರು ಸ್ಥಾನಗಳನ್ನು ತುಂಬಲಾಗುವುದು ಎಂದು ಹೇಳಿದರು.

ಸಂಪುಟ ಸೇರಲು ಸಾಕಷ್ಟುಜನರು ಆಕಾಂಕ್ಷಿಗಳಿದ್ದಾರೆ. ಕಾಂಗ್ರೆಸ್‌ ಪಾಲಿನ ಆರು ಮತ್ತು ಜೆಡಿಎಸ್‌ ಪಾಲಿನ ಒಂದು ಸಚಿವ ಸ್ಥಾನ ಭರ್ತಿಯಾಗಲಿದೆ ಎಂದು ಹೇಳಿದರು. ಈ ಮೂಲಕ ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿದೊಡ್ಡದಿದೆ ಎಂಬುವುದನ್ನು ಅವರು ಪರೋಕ್ಷವಾಗಿ ಒಪ್ಪಿಕೊಂಡರು.

ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಲಿದ್ದು, ಕಾಂಗ್ರೆಸ್‌ನಿಂದ 20 ಜನ ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗುವುದು ಎಂದು ತಿಳಿಸಿದರು.

ಇತ್ತ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್‌ ಗುಂಡುರಾವ್‌ ಅವರು ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿ ಪ್ರಕ್ರಿಯೆ ಎಲ್ಲವೂ ಮೊದಲೇ ತಿಳಿಸಿದಂತೆ ಅ.10ರಂದು ನಡೆಯುತ್ತದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರು ಅ.10ರೊಳಗಾಗಿ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಹಾಗೂ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದೆ. ಬಳಿಕ ರಾಜ್ಯ ನಾಯಕರು ಒಂದು ದಿನ ದೆಹಲಿಗೆ ಭೇಟಿ ನೀಡಿದರೆ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ-ಮಂಡಳಿ ನೇಮಕಾತಿ ಬಗ್ಗೆ ಎಲ್ಲವೂ ಅಂತಿಮವಾಗುತ್ತದೆ. ಹೀಗಾಗಿ ಅ.10ರೊಳಗಾಗಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಆದರೆ, ಮೂಲಗಳ ಪ್ರಕಾರ ಕಾಂಗ್ರೆಸ್‌ ನಾಯಕತ್ವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್‌ನಿಂದ ಎಷ್ಟುಸ್ಥಾನ ತುಂಬಿಕೊಳ್ಳಬೇಕು ಎಂಬ ಬಗ್ಗೆ ಇನ್ನೂ ಗೊಂದಲದಲ್ಲೇ ಇದೆ. ಖಾಲಿ ಇರುವ ಆರು ಸ್ಥಾನ ತುಂಬಬೇಕು ಎಂಬ ಒತ್ತಡವಿದ್ದರೂ, ನಾಲ್ಕು ಸ್ಥಾನ ತುಂಬಿಕೊಂಡು ಉಳಿದ ಎರಡು ಸ್ಥಾನಗಳನ್ನು ಖಾಲಿ ಬಿಡುವುದು ಉತ್ತಮ. ಎಲ್ಲ ಸ್ಥಾನಗಳನ್ನು ತುಂಬಿಬಿಟ್ಟರೆ ಭಿನ್ನಮತೀಯ ಚಟುವಟಿಕೆಗೆ ಆಸ್ಪದ ನೀಡಿದಂತಾಗುತ್ತದೆ ಎಂಬ ಚಿಂತನೆ ಪಕ್ಷದಲ್ಲಿದೆ ಎಂದು ಹೇಳಲಾಗಿದೆ.