ಬೆಂಗಳೂರು :  ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ರಾಮ​ಲಿಂಗಾರೆಡ್ಡಿ ಕೆಂಡಾ​ಮಂಡ​ಲ​ರಾ​ಗಿದ್ದು, ಉಪ ಮುಖ್ಯ​ಮಂತ್ರಿ ಪರ​ಮೇ​ಶ್ವರ್‌, ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಹಾಗೂ ಪರೋ​ಕ್ಷ​ವಾಗಿ ಸಚಿವ ಕೃಷ್ಣಬೈರೇ​ಗೌಡ ವಿರುದ್ಧ ತೀವ್ರ ವಾಗ್ದಾಳಿ ನಡೆ​ಸಿ​ದ್ದಾ​ರೆ.

ಸಚಿವ ಸ್ಥಾನ​ದಿಂದ ತಮ್ಮನ್ನು ದೂರ​ವಿ​ಡಲು ಬಳ​ಸ​ಲಾದ ಮಾನ​ದಂಡವನ್ನೇ ಅವರು ಪ್ರಶ್ನೆ ಮಾಡಿದ್ದು, ಪಕ್ಷವು ಒಬ್ಬೊಬ್ಬರಿಗೆ ಒಂದೊಂದು ಮಾನದಂಡ ಅನುಸರಿಸಿ ಸಚಿವ ಸ್ಥಾನ ನೀಡಿದೆ. ನನ್ನ ವಿರುದ್ಧ ಷಡ್ಯಂತ್ರ ಮಾಡಿ ಸ್ಥಾನ ತಪ್ಪಿ​ಸ​ಲಾ​ಗಿದೆ. ಈ ಷಡ್ಯಂತ್ರ ನಡೆ​ಸು​ತ್ತಿ​ರು​ವವರ ಹೆಸರು ಸದ್ಯದಲ್ಲೇ ಬಹಿರಂಗಗೊಳಿಸುತ್ತೇನೆ ಎಂದು ಹೇಳಿ​ದ​ರು.

ಭಾನು​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ನಾಲ್ಕು ಬಾರಿ ಸಚಿವರಾಗಿದ್ದವರಿಗೆ ಮತ್ತೆ ಸಚಿವ ಸ್ಥಾನ ಬೇಡ. ಹೊಸ​ಬ​ರಿಗೆ ಅವ​ಕಾಶ ಕೊಡ​ಬೇಕು ಎಂಬ ಮಾನದಂಡ ಪಾಲನೆ ಮಾಡಿ ನನ್ನನ್ನು ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಹೊಸಬರಿಗೆ ಅವಕಾಶ ನೀಡಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ, ಒಬ್ಬರಿಗೊಂದು ಮತ್ತೊಬ್ಬರಿಗೊಂದು ನ್ಯಾಯ ಮಾಡಬಾರದು. ಮಾನದಂಡ ಅಂದ ಮೇಲೆ ಅದು ಎಲ್ಲರಿಗೂ ಸಮಾನವಾಗಿರಬೇಕು. ಆರ್‌.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾಜ್‌ರ್‍, ಎಂ.ಬಿ.ಪಾಟೀಲ್‌, ಡಾ.ಜಿ. ಪರಮೇಶ್ವರ್‌ ಕನಿಷ್ಠ ನಾಲ್ಕು ಬಾರಿ ಸಚಿವರಾಗಿದ್ದವರು. ಇವ​ರಿಗೆ ಸಚಿವ ಸ್ಥಾನ ನೀಡಿ, ನನಗೆ ನೀಡಿಲ್ಲ ಎಂದರೆ ಹೇಗೆ? ರಾಜ್ಯದಲ್ಲಿ ನಡೆಯುವ ವಿದ್ಯಮಾನ ದೆಹಲಿಗೆ ತಿಳಿಸುವ ಮುಖಂಡರು ಈ ಪ್ರಶ್ನೆಗೆ ಉತ್ತ​ರಿ​ಸ​ಬೇಕು ಎಂದು ಹೆಸರು ಹೇಳದೆ ಸಚಿವ ಕೃಷ್ಣಬೈ​ರೇಗೌಡ ಅವರ ವಿರುದ್ಧ ಕಿಡಿ​ಕಾ​ರಿ​ದ​ರು.

ನನ್ನ ವಿರುದ್ಧ ಲಾಬಿ ಮಾಡಿದವರು ಯಾರು ಎಂಬುದು ಗೊತ್ತು. ಅವರ ಹೆಸರು ಸದ್ಯದಲ್ಲೇ ಬಹಿರಂಗಪಡಿಸಿ ಸೂಕ್ತ ಕಾಲ​ದಲ್ಲಿ ಉತ್ತರ ನೀಡುವೆ. ಕಾಲ​ಚಕ್ರ ಇದೇ ರೀತಿ ಇರು​ವು​ದಿಲ್ಲ. ಹೀಗಂತ ನಾನು ಯಾರನ್ನೂ ಹೆದರಿಸುತ್ತಿಲ್ಲ. ನಾನು ಯಾರಿಗೂ ಹೆದರುವುದೂ ಇಲ್ಲ. ರಾಜ್ಯ​ ಕಾಂಗ್ರೆ​ಸ್‌​ನಲ್ಲಿ ಮೂರ್ನಾಲ್ಕು ಮಂದಿ ಆಟ ಆಡು​ತ್ತಿ​ದ್ದಾರೆ ಎಂದು ದೂರಿದರು.

ಪಕ್ಷ ಅಧಿಕಾರಕ್ಕೆ ಬಂದಾಗ ಯಾರನ್ನು ಉಪಯೋಗಿಸಬೇಕು ಎಂಬುದನ್ನು ಪಕ್ಷವೇ ನಿರ್ಧರಿಸುತ್ತದೆ. ಪ್ರಸ್ತುತ ನನ್ನ ಅವಶ್ಯಕತೆ ಕಾಣಿಸುತ್ತಿಲ್ಲ ಎನಿಸುತ್ತಿದೆ. 2018ರ ಚುನಾವಣೆ ಬಳಿಕ ಮಂತ್ರಿ ಮಂಡಲ ರಚನೆ ವೇಳೆ ಹಾಗೂ ಮಂತ್ರಿ ಮಂಡಲ ರಚನೆಯಾದ ಬಳಿಕವೂ ನಾನು ಸಚಿವ ಸ್ಥಾನ ಕೇಳಲಿಲ್ಲ. ಇದೀಗ ಸಚಿವ ಸಂಪುಟ ವಿಸ್ತರಣೆ ವೇಳೆಯೂ ಸಚಿವ ಸ್ಥಾನ ಕೇಳಿಲ್ಲ. ಮುಂದೆಯೂ ಕೇಳು​ವು​ದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಸಚಿವರು ಮೋದಿ ವಿರುದ್ಧ ಮಾತಾಡಿಲ್ಲ:

ನಾನು ಪಕ್ಷ ನಿಷ್ಠ. ಪಕ್ಷಕ್ಕಾಗಿ ಎಂತಹವರನ್ನೂ ಎದುರು ಹಾಕಿಕೊಳ್ಳುತ್ತೇನೆ. ವಿಧಾನಸಭೆ ಚುನಾವಣೆಗೆ ಮೊದಲು ಏಳೆಂಟು ತಿಂಗಳ ಕಾಲ ನಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟಾ್ರಧ್ಯಕ್ಷ ಅಮಿತ್‌ ಶಾ ವಿರುದ್ಧ ಕಟುವಾಗಿ ಮಾತನಾಡಿದ್ದೇನೆ. ನಮ್ಮ ಪಕ್ಷದ ಮುಖಂಡರು, ಮಂತ್ರಿಗಳು ಆ ಎಂಟು ಒಂಬತ್ತು ತಿಂಗಳಲ್ಲಿ ಬಿಜೆಪಿ, ನರೇಂದ್ರ ಮೋದಿ ವಿರುದ್ಧ ಎಷ್ಟುಜನ ಬಾಯ್ಬಿಟ್ಟಿದ್ದಾರೆ ನೀವೇ ಹೇಳಿ ಎಂದು ಪ್ರಶ್ನಿಸುವ ಮೂಲಕ ಕಾಂಗ್ರೆಸ್‌ ಸಚಿವರ ನಡೆ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದರು.

ಕಿರಿಯರಿಂದ ನನ್ನ ವಿರುದ್ಧ ಷಡ್ಯಂತ್ರ:

ಪಕ್ಷ ನೀಡಿದ ಎಲ್ಲಾ ಜವಾಬ್ದಾರಿ ಪೂರೈಸಿದ್ದೇನೆ. ಪಕ್ಷದ ಹಿರಿಯ ನಾಯಕರು ನಾನು ಅಸಮರ್ಥನಾ ಅಥವಾ ಪಕ್ಷದ ಕೆಲಸದಲ್ಲಿ ಹಿಂದೆ ಬಿದ್ದಿದ್ದೇನಾ ಎಂಬುದನ್ನು ತಿಳಿಸಬೇಕು. ಹಾಗಂತ ನಾನು ಸಿದ್ದರಾಮಯ್ಯ ಅವರ ಬಗ್ಗೆ ದೂರುವುದಿಲ್ಲ. ಅವರಿಗೆ ನನ್ನ ಮೇಲೆ ಉತ್ತಮ ಅಭಿಪ್ರಾಯ ಇದೆ. ಅವರ ಸಂಪುಟದಲ್ಲಿ ಸಾರಿಗೆ ಸಚಿವ, ಗೃಹ ಸಚಿವರಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಅವರ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಹೇಳಿದರು.

ಇದರ ನಡುವೆಯೇ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 26 ವರ್ಷದ ಹಿಂದೆಯೇ 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಚಿವನಾಗಿದ್ದೆ. 1973ರಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವನು ನಾನು. ಆದರೆ, ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದು ತೀರಾ ಚಿಕ್ಕವರು. ನನ್ನ ಅನುಭವಕ್ಕೆ ಹೋಲಿಸಿದರೆ ಇತ್ತೀಚೆಗೆ ಪಕ್ಷಕ್ಕೆ ಬಂದವರು ಎಂದು ಹೇಳಿದರು. ಈ ಮೂಲಕ ತಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿರುವುದು ನಗರದ ಕಿರಿಯ ಶಾಸಕರು ಎಂದು ಪರೋಕ್ಷವಾಗಿ ನುಡಿದರು.

ಪರಮೇಶ್ವರ್‌ಗೆ ಹೇಗೆ ಅಧಿಕಾರ ಕೊಟ್ಟರು?

ನಾಲ್ಕು ಬಾರಿ ಸಚಿವರಾಗಿದ್ದ ಹಾಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರಿಗೆ ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳ ಉಸ್ತುವಾರಿಯನ್ನು ಹೇಗೆ ನೀಡಿದರು ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.

ನಾಲ್ಕು ಬಾರಿ ಸಚಿವರಾದವರಿಗೆ ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ. ಆದರೆ, ನಾಲ್ಕು ಬಾರಿ ಸಚಿವರಾದ ಪರಮೇಶ್ವರ್‌ ಅವರಿಗೆ ಸಚಿವ ಸ್ಥಾನದ ಜತೆಗೆ ಬೆಂಗಳೂರು ಹಾಗೂ ತುಮಕೂರು ಜಿಲ್ಲೆಗಳ ಉಸ್ತುವಾರಿಯನ್ನು ನೀಡಿದ್ದಾರೆ. ಇದನ್ನೆಲ್ಲಾ ಸಹಿಸಿಕೊಂಡು ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ. ಕಾಂಗ್ರೆಸ್‌ ಪಕ್ಷ ಯಾರೊಬ್ಬರ ಆಸ್ತಿಯೂ ಅಲ್ಲ. ಕಾಲ ಚಕ್ರದಲ್ಲಿ ಕೆಲವರ ಕೈ ಮೇಲಾಗಿದೆ. ಆದರೆ ಮುಂದೆಯೂ ಇದೇ ಪರಿಸ್ಥಿತಿ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.